ಹಮಾಸ್ ಕಳುಹಿಸಿದ ಶವಪೆಟ್ಟಿಗೆಯಲ್ಲಿ ಬೇರೆ ಒತ್ತೆಯಾಳಿನ ಮೃತದೇಹದ ಅವಶೇಷ : ಇಸ್ರೇಲ್ ಆರೋಪ

PC: x.com/WIONews
ಟೆಲ್ ಅವೀವ್, ಅ. 28: ಹಮಾಸ್ ಸೋಮವಾರ ಹಸ್ತಾಂತರಿಸಿರುವ ಶವಪೆಟ್ಟಿಗೆಯೊಂದರಲ್ಲಿ ನಿರ್ದಿಷ್ಟ ಒತ್ತೆಯಾಳಿನ ದೇಹವಿರಲಿಲ್ಲ, ಬದಲಿಗೆ ಈ ಹಿಂದೆ ಮರಳಿಸಲಾದ ಒತ್ತೆಯಾಳಿನ ಮೃತದೇಹದ ಹೆಚ್ಚಿನ ಭಾಗಗಳಿದ್ದವು ಎಂದು ಇಸ್ರೇಲ್ ಆರೋಪಿಸಿದೆ.
ಸೋಮವಾರ ಹಸ್ತಾಂತರಿಸಲಾದ ದೇಹದ ಭಾಗಗಳು ಓಫಿರ್ ಝರ್ಫಾಟಿ ಎಂಬವರಿಗೆ ಸೇರಿದವುಗಳು ಎನ್ನುವುದು ವಿಧಿವಿಜ್ಞಾನ ಪರೀಕ್ಷೆಗಳಿಂದ ದೃಢಪಟ್ಟಿದೆ. ಅವರ ಮೃತದೇಹವನ್ನು 2023ರ ಕೊನೆಯ ಭಾಗದಲ್ಲಿ ಇಸ್ರೇಲಿ ಪಡೆಗಳು ವಶಪಡಿಸಿಕೊಂಡಿದ್ದವು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಕಚೇರಿ ತಿಳಿಸಿದೆ. ಅವುಗಳು ಈಗಲೂ ಗಾಝಾದಲ್ಲಿರುವ 13 ಮೃತ ಒತ್ತೆಯಾಳುಗಳಿಗೆ ಸೇರಿದ್ದಲ್ಲ ಎಂದು ಹೇಳಿದೆ.
ಈ ಮೂಲಕ, ಎರಡು ವಾರಗಳ ಹಿಂದೆ ಅನುಷ್ಠಾನಕ್ಕೆ ಬಂದಿರುವ ಗಾಝಾ ಯುದ್ಧವಿರಾಮ ಒಪ್ಪಂದವನ್ನು ಹಮಾಸ್ ‘‘ಸ್ಪಷ್ಟವಾಗಿ ಉಲ್ಲಂಘಿಸಿದೆ’’ ಎಂಬುದಾಗಿಯೂ ಇಸ್ರೇಲ್ ಪ್ರಧಾನಿ ಕಚೇರಿ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ನೆತನ್ಯಾಹು ಚರ್ಚಿಸುತ್ತಾರೆ ಎಂದು ಹೇಳಿದೆ.
28 ಮೃತ ಒತ್ತೆಯಾಳುಗಳ ಪೈಕಿ ಕೇವಲ 15 ಮಂದಿಯ ಮೃತದೇಹಗಳನ್ನು ವಾಪಸ್ ಕಳುಹಿಸಿರುವುದಕ್ಕಾಗಿ ಹಮಾಸ್ ವಿರುದ್ಧ ತೆಗೆದುಕೊಳ್ಳಬೇಕಾದ ದಂಡನಾ ಕ್ರಮಗಳ ಬಗ್ಗೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
► ಮೃತದೇಹಗಳನ್ನು ಪತ್ತೆಹಚ್ಚಲು ಸಹಾಯ ಬೇಕು: ಹಮಾಸ್
ಈ ಆರೋಪಗಳಿಗೆ ಹಮಾಸ್ ತಕ್ಷಣಕ್ಕೆ ಪ್ರತಿಕ್ರಿಯೆಯನ್ನು ನೀಡಿಲ್ಲ. ಅಮೆರಿಕ, ಈಜಿಪ್ಟ್, ಖತರ್ ಮತ್ತು ತುರ್ಕಿಯ ಮಧ್ಯಸ್ಥಿಕೆಯಲ್ಲಿ ನಡೆದಿರುವ ಯುದ್ಧವಿರಾಮ ಒಪ್ಪಂದಕ್ಕೆ ತಾನು ಬದ್ಧನಾಗಿರುವುದಾಗಿ ಹಮಾಸ್ ಹೇಳಿದೆ. ಆದರೆ, ಎರಡು ವರ್ಷಗಳ ಇಸ್ರೇಲ್ ಆಕ್ರಮಣದಿಂದಾಗಿ ಅವಶೇಷಗಳ ಅಡಿಯಲ್ಲಿ ಸಮಾಧಿಯಾಗಿರುವ ಮೃತದೇಹಗಳನ್ನು ಪತ್ತೆಹಚ್ಚಲು ತನಗೆ ನೆರವಿನ ಅಗತ್ಯವಿದೆ ಎಂದು ಅದು ತಿಳಿಸಿದೆ.
ಸೋಮವಾರ ಕಟ್ಟಡಗಳ ಅವಶೇಷಗಳಡಿಯಿಂದ ಪತ್ತೆಹಚ್ಚಲಾಗಿರುವ ಇಸ್ರೇಲ್ ಒತ್ತೆಯಾಳುವೊಬ್ಬರ ದೇಹವನ್ನು ರೆಡ್ ಕ್ರಾಸ್ಗೆ ಹಸ್ತಾಂತರಿಸುವುದಾಗಿ ಹಮಾಸ್ನ ಸೇನಾ ಘಟಕವು ಸೋಮವಾರ ಸಂಜೆ ಘೋಷಿಸಿದೆ.
ಕೆಲವು ಗಂಟೆಗಳ ಬಳಿಕ, ಗಾಝಾದಲ್ಲಿರುವ ತನ್ನ ಪಡೆಗಳು ಶವಪೆಟ್ಟಿಗೆಯೊಂದನ್ನು ಸ್ವೀಕರಿಸಿವೆ ಹಾಗೂ ಅದನ್ನು ಗುರುತು ಪತ್ತೆಹಚ್ಚುವ ವಿಧಿವಿಧಾನಗಳಿಗಾಗಿ ಟೆಲ್ ಅವೀವ್ನಲ್ಲಿರುವ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫಾರೆನ್ಸಿಕ್ ಮೆಡಿಸಿನ್ಗೆ ಸಾಗಿಸಿವೆ ಎಂಬುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿತು.
ಸೋಮವಾರ ಹಮಾಸ್ ಕಳುಹಿಸಿರುವ ಅವಶೇಷಗಳು ಎರಡು ವರ್ಷಗಳ ಹಿಂದೆ ಮೃತಪಟ್ಟ ಒತ್ತೆಯಾಳು ಓಫಿರ್ ಝರ್ಫಾಟಿಗೆ ಸೇರಿವೆ ಮತ್ತು ಅವರ ದೇಹವನ್ನು ಎರಡು ವರ್ಷಗಳ ಹಿಂದೆಯೇ ಪಡೆಯಲಾಗಿತ್ತು ಎಂದು ಮಂಗಳವಾರ ಮಧ್ಯಾಹ್ನ ಇಸ್ರೇಲ್ ಪ್ರಧಾನಿಯ ಕಚೇರಿ ತಿಳಿಸಿದೆ.







