ಇಸ್ರೇಲ್-ಗಾಝಾ ಶಾಂತಿ ಒಪ್ಪಂದ; ತ್ವರಿತ ಪ್ರಕ್ರಿಯೆಗೆ ಟ್ರಂಪ್ ಸೂಚನೆ

PC: x.com/elarsenalmx
ವಾಷಿಂಗ್ಟನ್: ಇಸ್ರೇಲ್ ಹಾಗೂ ಗಾಝಾ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲರೂ 'ತ್ವರಿತವಾಗಿ ಮುನ್ನಡೆಯಬೇಕು. ಇದಕ್ಕೆ ವಿಫಲವಾದಲ್ಲಿ ರಕ್ತಪಾತವಾದೀತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಎಚ್ಚರಿಕೆ ನೀಡಿದ್ದಾರೆ.
"ಹಮಾಸ್ ಜತೆಗೆ ಧನಾತ್ಮಕ ಮಾತುಕತೆ ನಡೆದಿದೆ. ಈ ವಾರಾಂತ್ಯದಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ಮತ್ತು ಯುದ್ಧಕೊನೆಗೊಳಿಸುವ ನಿಟ್ಟಿನಲ್ಲಿ ವಿಶ್ವದ ಎಲ್ಲ ಅರಬ್, ಮುಸ್ಲಿಂ ಮತ್ತು ಇತರ ದೇಶಗಳ ಜತೆ ಮಾತುಕತೆ ನಡೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ಧೀರ್ಘಕಾಲೀನ ಶಾಂತಿ ಸ್ಥಾಪನೆಗೆ ಪ್ರಯತ್ನ ಮುಂದುವರಿದಿದೆ" ಎಂದು ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
"ಎಲ್ಲ ಮಾತುಕತೆಗಳು ಅತ್ಯಂತ ಯಶಸ್ವಿಯಾಗಿವೆ. ಪ್ರಕ್ರಿಯೆಗಳು ಕ್ಷಿಪ್ರವಾಗಿ ನಡೆಯುತ್ತಿವೆ. ತಾಂತ್ರಿಕ ತಂಡಗಳು ಸೋಮವಾರ ಮತ್ತೆ ಈಜಿಪ್ಟ್ ನಲ್ಲಿ ಭೇಟಿ ಮಾಡಿ, ಅಂತಿಮ ವಿವರಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿವೆ" ಎಂದು ವಿವರಿಸಿದ್ದಾರೆ.
ಮೊದಲ ಹಂತದ ಯೋಜನೆ ಈ ವಾರಾಂತ್ಯದಲ್ಲಿ ಮುಕ್ತಾಯವಾಗಬೇಕು. "ಪ್ರತಿಯೊಬ್ಬರೂ ವೇಗವಾಗಿ ಮುನ್ನಡೆಯುವಂತೆ ಸೂಚಿಸುತ್ತಿದ್ದೇನೆ. ಈ ದೇಶಗಳ ಹಳೆಯ ಸಂಘರ್ಷದ ಮೇಲೆ ನಿಗಾ ಇಡಲಿದ್ದೇವೆ. ಸಮಯವೇ ಮುಖ್ಯ. ತಪ್ಪಿದಲ್ಲಿ ರಕ್ತಪಾತವಾದೀತು. ಇದನ್ನು ನೋಡಲು ಯಾರೂ ಬಯಸಲಾರರು" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಂತಿ ಯೋಜನೆಯನ್ನು ಒಪ್ಪಿಕೊಳ್ಳಲು ರವಿವಾರದ ಗಡುವು ನೀಡಲಾಗಿತ್ತು. ಇದು ಒಪ್ಪಂದಕ್ಕೆ ಬರಲು ಕೊನೆಯ ಅವಕಾಶ; ಇದು ಸಾಧ್ಯವಾಗದೇ ಇದ್ದರೆ, ಈ ಹಿಂದೆ ಯಾರೂ ನೋಡಿರಲಾರದ ರೀತಿಯಲ್ಲಿ ಹಮಾಸ್ ಛಿದ್ರವಾಗಲಿದೆ ಎಂದು ಈ ಮೊದಲು ಟ್ರಂಪ್ ಎಚ್ಚರಿಕೆ ನೀಡಿದ್ದರು.







