ಗಾಝಾ ನಗರದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಇಸ್ರೇಲಿಗರ ವಿರೋಧ!

photo credit - EPA
ಟೆಲ್ಅವೀವ್, ಸೆ.7: ಇಸ್ರೇಲ್ ನ ಟೆಲ್ ಅವೀವ್ ನಲ್ಲಿ ಶನಿವಾರ ರಾತ್ರಿ ಸಾವಿರಾರು ಇಸ್ರೇಲಿ ಪ್ರಜೆಗಳು ರ್ಯಾಲಿ ನಡೆಸಿದ್ದು ಗಾಝಾ ಯುದ್ಧವನ್ನು ಕೊನೆಗೊಳಿಸಲು ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ನೇರವಾಗಿ ಮನವಿ ಮಾಡಿದ್ದಾರೆ.
ಟೆಲ್ ಅವೀವ್ ನ ಮಿಲಿಟರಿ ಕೇಂದ್ರಕಚೇರಿಯ ಎದುರಿನ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಗಾಝಾದಲ್ಲಿ ಬಂಧಿಯಾಗಿರುವ ಒತ್ತೆಯಾಳುಗಳ ಚಿತ್ರವಿದ್ದ ಫಲಕಗಳನ್ನು ಪ್ರದರ್ಶಿಸಿ ಇಸ್ರೇಲಿ ಧ್ವಜಗಳನ್ನು ಬೀಸುತ್ತಿದ್ದರು. `ಗಾಝಾ ಯುದ್ಧ ಮುಂದುವರಿದಂತೆ ಟ್ರಂಪ್ ಅವರ ಪರಂಪರೆ ಕುಸಿಯುತ್ತಿದೆ' , ` ಅಧ್ಯಕ್ಷ ಟ್ರಂಪ್, ಒತ್ತೆಯಾಳುಗಳನ್ನು ಈಗಲೇ ರಕ್ಷಿಸಿ' ಎಂದು ಘೋಷಣೆ ಕೂಗಿದರು ಎಂದು ವರದಿಯಾಗಿದೆ.
`ಹಮಾಸ್ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸುವ ಭರದಲ್ಲಿ ಇಸ್ರೇಲ್ ಸರಕಾರ ಒತ್ತೆಯಾಳುಗಳನ್ನು ಬಲಿಕೊಡುತ್ತಿದೆ. ಜಗತ್ತಿನಲ್ಲಿ ನೆತನ್ಯಾಹುರನ್ನು ನಿಯಂತ್ರಿಸುವ ಮತ್ತು ಅವರನ್ನು ಯುದ್ಧ ಕೊನೆಗೊಳಿಸಲು ಒತ್ತಾಯಿಸುವ ಅಧಿಕಾರವಿರುವ ಏಕೈಕ ವ್ಯಕ್ತಿ ಟ್ರಂಪ್ ಎಂದು ನಾವು ಭಾವಿಸುತ್ತೇವೆ. ಒತ್ತೆಯಾಳುಗಳು ಸ್ವದೇಶಕ್ಕೆ ಮರಳುವ ಸಮಗ್ರ ಒಪ್ಪಂದಕ್ಕೆ ಎರಡೂ ಕಡೆಯವರನ್ನು ಒಪ್ಪಿಸಲು ಅಮೆರಿಕಕ್ಕೆ ಸಾಧ್ಯವಿದೆ ' ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಈ ಮಧ್ಯೆ, ಒತ್ತೆಯಾಳುಗಳನ್ನು ಇರಿಸಲಾಗಿದೆ ಎಂದು ಊಹಿಸಲಾದ ಪ್ರಮುಖ ನಗರಕೇಂದ್ರವನ್ನು ವಶಕ್ಕೆ ಪಡೆಯುವಂತೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಆದೇಶಿಸಿರುವುದು ಹಲವಾರು ಇಸ್ರೇಲಿಯನ್ನರಲ್ಲಿ ಹತಾಶೆಯನ್ನು ಹೆಚ್ಚಿಸಿದೆ. ಗಾಝಾ ನಗರದ ಮೇಲಿನ ದಾಳಿಯು ಒತ್ತೆಯಾಳುಗಳ ಜೀವವನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಒತ್ತೆಯಾಳುಗಳ ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಇಸ್ರೇಲಿ ಒತ್ತೆಯಾಳು, 24 ವರ್ಷದ ಗಿಲ್ಬೊವ ದಲಾಲ್ `ತಾನು ಗಾಝಾ ನಗರದಲ್ಲಿ ಒತ್ತೆಸೆರೆಯಲ್ಲಿದ್ದು ನಗರದ ಮೇಲಿನ ಮಿಲಿಟರಿ ದಾಳಿಯಲ್ಲಿ ಸಾವನ್ನಪ್ಪುವ ಭೀತಿಯಿದೆ' ಎಂದು ಹೇಳಿಕೆ ನೀಡಿರುವ ವೀಡಿಯೊವನ್ನು ಹಮಾಸ್ ಶುಕ್ರವಾರ ಬಿಡುಗಡೆಗೊಳಿಸಿದೆ.
ಒತ್ತೆಯಾಳುಗಳ ಈ ರೀತಿಯ ವೀಡಿಯೊಗಳು ಅಮಾನವೀಯ ಎಂದು ಮಾನವ ಹಕ್ಕುಗಳ ಗುಂಪುಗಳು ಖಂಡಿಸಿದ್ದರೆ ಇದು ಮಾನಸಿಕ ಯುದ್ಧತಂತ್ರ ಎಂದು ಇಸ್ರೇಲ್ ಟೀಕಿಸಿದೆ.







