ಇಸ್ರೇಲ್-ಹಮಾಸ್ ಕದನ ವಿರಾಮ | ಡೊನಾಲ್ಡ್ ಟ್ರಂಪ್ ಗೆ ಎದ್ದು ನಿಂತು ಹರ್ಷೋದ್ಗಾರದ ಸ್ವಾಗತ ಕೋರಿದ ಇಸ್ರೇಲ್ ಸಂಸದರು

ಡೊನಾಲ್ಡ್ ಟ್ರಂಪ್ |Photo Credit ; PTI
ಟೆಲ್ ಅವೀವ್: ಎರಡು ವರ್ಷಗಳ ದುಃಖದಾಯಕ ಯುದ್ಧವನ್ನು ಅಂತ್ಯಗೊಳಿಸಲು ಗಾಝಾ ಕದನ ವಿರಾಮವನ್ನು ಏರ್ಪಡಿಸಲಾಗಿದೆ ಎಂದು ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಇದಕ್ಕೂ ಮುನ್ನ, ಇಸ್ರೇಲ್ ಸಂಸತ್ತಿಗೆ ಆಗಮಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಇಸ್ರೇಲ್ ಸಂಸದರು ಎದ್ದು ನಿಂತು ಹರ್ಷೋದ್ಗಾರದ ಸ್ವಾಗತ ಕೋರಿದರು.
ಬಳಿಕ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಶ್ವೇತ ಭವನದಲ್ಲಿ ಇಸ್ರೇಲ್ ಈವರೆಗೆ ಕಂಡಿರುವ ಅದ್ಭುತ ಸ್ನೇಹಿತ ಡೊನಾಲ್ಡ್ ಟ್ರಂಪ್ ಆಗಿದ್ದಾರೆ. ಅವರೊಂದಿಗೆ ಭವಿಷ್ಯದಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಶ್ಲಾಘಿಸಿದರು.
ಇಸ್ರೇಲ್ ಭೇಟಿಗಾಗಿ ಬೆನ್-ಗುರಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ ಮತ್ತು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಝೋಗ್ ಹಾಗೂ ಅವರ ಪತ್ನಿ ಮಿಖಲ್ ಜೊತೆಗೂಡಿ ಸ್ವಾಗತಿಸಿದರು.
ಈ ನಡುವೆ, ಕದನ ವಿರಾಮ ಒಪ್ಪಂದದ ಭಾಗವಾಗಿ ಎಲ್ಲ 20 ಮಂದಿ ಇಸ್ರೇಲ್ ಒತ್ತೆಯಾಳುಗಳನ್ನು ಗಾಝಾದಲ್ಲಿನ ರೆಡ್ ಕ್ರಾಸ್ ಪ್ರತಿನಿಧಿಗಳಿಗೆ ಹಮಾಸ್ ಹಸ್ತಾಂತರಿಸಿತು.





