ಮಧ್ಯಪ್ರಾಚ್ಯ, ಉಕ್ರೇನ್ ಸಂಘರ್ಷದಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ ಅವಳಿ ಆಘಾತ: ವಿಶ್ವಬ್ಯಾಂಕ್ ಎಚ್ಚರಿಕೆ

File Photo (PTI)
ನ್ಯೂಯಾರ್ಕ್: ಇಸ್ರೇಲ್-ಹಮಾಸ್ ಯುದ್ಧವು ತೀವ್ರಗೊಂಡರೆ ತೈಲ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಬಹುದು ಮತ್ತು ಇದರಿಂದ ವಿಶ್ವದಾದ್ಯಂತ ಆಹಾರದ ಬೆಲೆಯೂ ಹೆಚ್ಚಬಹುದು. ಉಕ್ರೇನ್ ಯುದ್ಧ ಮತ್ತು ಮಧ್ಯಪ್ರಾಚ್ಯ ಸಂಘರ್ಷವು ಜಾಗತಿಕ ಸರಕು ಮಾರುಕಟ್ಟೆಗೆ ಅವಳಿ ಆಘಾತ ನೀಡಲಿದೆ ಎಂದು ವಿಶ್ವಬ್ಯಾಂಕ್ನ ವರದಿ ಎಚ್ಚರಿಕೆ ನೀಡಿದೆ.
ಗಮನಾರ್ಹವಾದ ತೈಲ ಬೆಲೆ ಹೆಚ್ಚಳದ ಆಘಾತವನ್ನು ನಿಭಾಯಿಸಲು ಜಾಗತಿಕ ಆರ್ಥಿಕತೆಯು 1970ಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದರೂ ಈ ಎರಡು ಸಂಘರ್ಷಗಳ ಸಂಯುಕ್ತ ಪರಿಣಾಮವು ಜಾಗತಿಕ ಸರಕು ಮಾರುಕಟ್ಟೆಯನ್ನು ಅಸಾಮಾನ್ಯ ಸಂಕಟಕ್ಕೆ ತಳ್ಳಬಹುದು ಎಂದು ವಿಶ್ವಬ್ಯಾಂಕ್ನ `ಸರಕು ಮಾರುಕಟ್ಟೆಗಳ ಮೇಲ್ನೋಟ' ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈಗ ನಡೆಯುತ್ತಿರುವ ಘರ್ಷಣೆ ತೀವ್ರಗೊಳ್ಳದಿದ್ದರೆ ಸಂಘರ್ಷದ ಸಂಭಾವ್ಯ ಪರಿಣಾಮ ಸೀಮಿತವಾಗಿರಲಿದೆ ಎಂದು ವರದಿ ಹೇಳಿದೆ. ಬ್ಯಾಂಕ್ ನ ಮೂಲಾಧಾರ ಮುನ್ಸೂಚನೆ(ಐತಿಹಾಸಿಕ ಬೇಡಿಕೆಯ ಆಧಾರದಲ್ಲಿ ಭವಿಷ್ಯದ ಬೇಡಿಕೆಯ ಅಂದಾಜು) ಪ್ರಕಾರ, ಪ್ರಸ್ತುತ ತ್ರೈಮಾಸಿಕದಲ್ಲಿ ತೈಲ ಬೆಲೆಗಳು ಪ್ರತೀ ಬ್ಯಾರೆಲ್ ಗೆ ಸರಾಸರಿ 90 ಡಾಲರ್ ಗೆ ಏರಬಹುದು, ಆದರೆ ಜಾಗತಿಕ ಆರ್ಥಿಕ ಬೆಳವಣಿಗೆ ನಿಧಾನವಾಗಿರುವುದರಿಂದ ಬಳಿಕ ಸರಾಸರಿ 81 ಡಾಲರ್ ಗೆ ಇಳಿಯಬಹುದು. ಜಾಗತಿಕ ಸರಕು ಮಾರುಕಟ್ಟೆಗಳ ಮೇಲೆ ಸಂಘರ್ಷದ ಪರಿಣಾಮಗಳು ಇಲ್ಲಿಯವರೆಗೆ ಸೀಮಿತವಾಗಿವೆ ಎಂದು ವರದಿ ಹೇಳಿದೆ.
ಸಂಘರ್ಷ ಆರಂಭವಾದಂದಿನಿಂದ ತೈಲ ಬೆಲೆಯಲ್ಲಿ ಸುಮಾರು 6%ದಷ್ಟು ಹೆಚ್ಚಳವಾಗಿದೆ. ಆದರೆ ಸಂಘರ್ಷ ಉಲ್ಬಣಿಸಿದರೆ ಸರಕು ಬೆಲೆಗಳು ತ್ವರಿತವಾಗಿ ಏರಿಕೆಯಾಬಹುದು. ಪರಿಣಾಮವು ತೈಲ ಪೂರೈಕೆಗೆ ಅಡ್ಡಿಪಡಿಸುವ ಮಟ್ಟವನ್ನು ಆಧರಿಸಿದೆ. ಅಡ್ಡಿಯ ಪ್ರಮಾಣ ಕಡಿಮೆಯಾಗಿದ್ದರೆ ಜಾಗತಿಕ ತೈಲ ಪೂರೈಕೆಯು ದೈನಂದಿನ ತೈಲ ಪೂರೈಕೆಯಲ್ಲಿ ಕನಿಷ್ಟ 5 ಲಕ್ಷ ಬ್ಯಾರೆಲ್ ನಷ್ಟು ಕಡಿಮೆಯಾಗಲಿದೆ ಮತ್ತು ಇದರಿಂದ ತೈಲ ದರದಲ್ಲಿ 3%ದಿಂದ 13%ದಷ್ಟ ಹೆಚ್ಚಳವಾಗಲಿದೆ. ಮಧ್ಯಮ ಅಡಚಣೆಯ ಮಟ್ಟದಲ್ಲಿ ದೈನಂದಿನ ತೈಲ ಪೂರೈಕೆ ಪ್ರಮಾಣ 3 ದಶಲಕ್ಷ ಬ್ಯಾರೆಲ್ನಿಂದ 5 ದಶಲಕ್ಷ ಬ್ಯಾರೆಲ್ನಷ್ಟು ಕಡಿಮೆಯಾಗಲಿದೆ ಮತ್ತು ತೈಲ ದರದಲ್ಲಿ 55%ದಿಂದ 75%ದಷ್ಟು ಏರಿಕೆಯಾಗಲಿದೆ. ಬೃಹತ್ ಪ್ರಮಾಣದ ಅಡ್ಡಿಯ ಸಂದರ್ಭ ದೈನಂದಿನ ತೈಲ ಪೂರೈಕೆ ಪ್ರಮಾಣ 6 ದಶಲಕ್ಷದಿಂದ 8 ದಶಲಕ್ಷ ಬ್ಯಾರೆಲ್ನಷ್ಟು ಕಡಿಮೆಯಾಗಲಿದೆ ಮತ್ತು ತೈಲ ದರದಲ್ಲಿ 56%ದಿಂದ 75%ದಷ್ಟು ಏರಿಕೆಯಾಗಲಿದೆ. ತೈಲ ಬೆಲೆ ಏರಿಕೆ ಅನಿವಾರ್ಯವಾಗಿ ಆಹಾರದ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ವರದಿ ಹೇಳಿದೆ.
ಸಂಘರ್ಷವು ಉಲ್ಬಣಗೊಂಡರೆ , ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ನೀತಿ ನಿರೂಪಕರು ಹಣದುಬ್ಬರದ ಸಂಭಾವ್ಯ ಹೆಚ್ಚಳವನ್ನು ನಿರ್ವಹಿಸಲು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹೆಚ್ಚಿನ ಆಹಾರ ಅಭದ್ರತೆಯ ಅಪಾಯವನ್ನು ಗಮನಿಸಿದರೆ, ಸರಕಾರಗಳು ಆಹಾರ ಮತ್ತು ರಸಗೊಬ್ಬರಗಳ ಮೇಲಿನ ರಫ್ತು ನಿಷೇಧದಂತಹ ವ್ಯಾಪಾರ ನಿರ್ಬಂಧ ಕ್ರಮಗಳನ್ನು ದೂರಗೊಳಿಸಬೇಕು. ಆಹಾರ ಮತ್ತು ತೈಲ ಬೆಲೆ ಏರಿಕೆಗೆ ಪ್ರತಿಯಾಗಿ ಬೆಲೆ ನಿಯಂತ್ರಣ ಮತ್ತು ಬೆಲೆ ಸಬ್ಸಿಡಿಗಳನ್ನು ಜಾರಿಗೊಳಿಸುವುದು ಸರಿಯಲ್ಲ. ಸಾಮಾಜಿಕ ಸುರಕ್ಷಾ ಜಾಲಗಳನ್ನು ಸುಧಾರಿಸುವುದು, ಆಹಾರ ಮೂಲಗಳನ್ನು ವೈವಿಧ್ಯಗೊಳಿಸುವುದು ಮತ್ತು ಆಹಾರ ಉತ್ಪಾದನೆ ಹಾಗೂ ವ್ಯಾಪಾರದಲ್ಲಿ ದಕ್ಷತೆಯನ್ನು ಹೆಚ್ಚಿಸುವುದು ಉತ್ತಮ ಆಯ್ಕೆಯಾಗಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.







