ಇರಾನಿನಲ್ಲಿ ತನ್ನ ಯುದ್ಧಗುರಿ ಸಾಧಿಸಲು ಇಸ್ರೇಲ್ ಶೋಚನೀಯ ವಿಫಲ: ಇರಾನ್ ವಿದೇಶಾಂಗ ಸಚಿವರ ವಾಗ್ದಾಳಿ

ಅಬ್ಬಾಸ್ ಅರಾಗ್ಚಿ | PC : X \ @IranNewsX
ಟೆಹ್ರಾನ್: ಇರಾನಿನ ಕ್ಷಿಪಣಿ ಸಾಮರ್ಥ್ಯಗಳ ಮೇಲೆ ನಿರ್ಬಂಧ ವಿಧಿಸಬೇಕೆಂಬ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಯನ್ನು ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಛಿ ಕಟುವಾಗಿ ಟೀಕಿಸಿದ್ದಾರೆ.
480 ಕಿ.ಮೀ ಮೀರಿದ ವ್ಯಾಪ್ತಿಯ ಕ್ಷಿಪಣಿ ಅಭಿವೃದ್ಧಿಗೊಳಿಸುವುದರಿಂದ ಇರಾನನ್ನು ನಿರ್ಬಂಧಿಸಬೇಕು ಎಂದು ನೆತನ್ಯಾಹು ಆಗ್ರಹಿಸಿದ್ದರು. ನೆತನ್ಯಾಹು ಹೇಳಿಕೆಯನ್ನು ತಿರಸ್ಕರಿಸಿದ ಅರಾಗ್ಛಿ ನೆತನ್ಯಾಹು ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಗಾಝಾದಲ್ಲಿ ಗೆಲುವು ಸಾಧಿಸಿರುವುದಾಗಿ ನೆತನ್ಯಾಹು ಸುಮಾರು 2 ವರ್ಷದ ಹಿಂದೆಯೇ ಪ್ರತಿಪಾದಿಸಿದ್ದರು. ಆದರೆ ಸಂಘರ್ಷ ಮುಂದುವರಿದಿದೆ, ಇಸ್ರೇಲ್ ಸೇನೆಗೆ ವ್ಯಾಪಕ ಹೊಡೆತ ಬೀಳುತ್ತಿದೆ. ಬಂಧನ ವಾರಾಂಟ್ ಎದುರಿಸಬೇಕಾಗಿದೆ ಮತ್ತು 2 ಲಕ್ಷ ಹೊಸ ಹಮಾಸ್ ನೇಮಕಾತಿ ನಡೆದಿದೆ ಎಂದು ಅವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನಿನ ಪರಮಾಣು ವಿಜ್ಞಾನಿಗಳು ಮತ್ತು ಮೂಲಸೌಕರ್ಯಗಳ ಮೇಲಿನ ಇಸ್ರೇಲ್ ದಾಳಿಯನ್ನು ಉಲ್ಲೇಖಿಸಿದ ಅವರು `ಇರಾನಿನಲ್ಲಿ 20 ವರ್ಷಗಳ ಶಾಂತಿಯುತ ಪರಮಾಣು ಸಾಧನೆಗಳನ್ನು ಅಳಿಸಿ ಹಾಕಬಹುದು ಎಂದವರು ಕನಸು ಕಂಡಿದ್ದರು. ಆದರೆ ಇಸ್ರೇಲ್ ಹತ್ಯೆ ಮಾಡಿದ ಪ್ರತಿಯೊಬ್ಬ ವಿಜ್ಞಾನಿಯ ಉತ್ತರಾಧಿಕಾರಿಗಳೂ ಈ ಸಾಧನೆಯನ್ನು ಮುಂದುವರಿಸಲಿದ್ದಾರೆ ಮತ್ತು ತಮ್ಮ ಸಾಮಥ್ರ್ಯವನ್ನು ನೆತನ್ಯಾಹುಗೆ ಸಾಬೀತು ಪಡಿಸಲಿದ್ದಾರೆ' ಎಂದು ಹೇಳಿದ್ದಾರೆ.
ಇರಾನಿನಲ್ಲಿ ತನ್ನ ಯಾವುದೇ ಯುದ್ಧ ಗುರಿಗಳನ್ನು ಸಾಧಿಸಲು ಶೋಚನೀಯವಾಗಿ ವಿಫಲವಾದ ಬಳಿಕ ಹಾಗೂ ನಮ್ಮ ಬಲಿಷ್ಠ ಕ್ಷಿಪಣಿಗಳು ಇಸ್ರೇಲ್ ನ ರಹಸ್ಯ ತಾಣಗಳನ್ನು ನೆಲಸಮಗೊಳಿಸಿದ ನಂತರ ನೆತನ್ಯಾಹು ತನ್ನ `ತಂದೆ'ಯ ಬಳಿಗೆ ಓಡುವ ಅನಿವಾರ್ಯತೆಗೆ ಸಿಲುಕಿದರು `ವಾಂಟೆಡ್ ಕ್ರಿಮಿನಲ್(ಅಂತರಾಷ್ಟ್ರೀಯ ನ್ಯಾಯಾಲಯದಿಂದ ಬಂಧನ ವಾರಾಂಟ್ ಎದುರಿಸುತ್ತಿರುವ ನೆತನ್ಯಾಹು) ಹೇಳುವುದೆಲ್ಲವನ್ನೂ ಇರಾನ್ ಸ್ವೀಕರಿಸುತ್ತದೆ ಎಂಬ ಭ್ರಮೆಯಲ್ಲಿ ಇಸ್ರೇಲ್ ಮತ್ತು ಅಮೆರಿಕ ಇದೆ' ಎಂದು ಅರಾಗ್ಛಿ ಟೀಕಿಸಿದ್ದಾರೆ.







