ಭಾಗಶಃ ಕದನ ವಿರಾಮಕ್ಕೆ ಇಸ್ರೇಲ್, ಹಿಜ್ಬುಲ್ಲಾ ಒಪ್ಪಿಗೆ: ಟ್ರಂಪ್ ಘೋಷಣೆ

ಡೊನಾಲ್ಡ್ ಟ್ರಂಪ್ | Photo Credit : AP, PTI
ಬೈರೂತ್, ಜೂ.2: ಅಮೆರಿಕ ಮಧ್ಯಸ್ಥಿಕೆಯ ಭಾಗಶಃ ಕದನ ವಿರಾಮ ಪ್ರಸ್ತಾಪಕ್ಕೆ ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಮ್ಮತಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಎರಡೂ ಕಡೆಯವರ ಜೊತೆ ಮಾತನಾಡಿದ್ದು ದಾಳಿ ನಿಲ್ಲಿಸಲು ಒಪ್ಪಿದ್ದಾರೆ. ಒಪ್ಪಂದದಡಿ, ಬೈರೂತ್ನ ದಕ್ಷಿಣ ಉಪನಗರ ದಹಿಯೆಹ್ ಮೇಲೆ ದಾಳಿಯನ್ನು ಇಸ್ರೇಲ್ ಸ್ಥಗಿತಗೊಳಿಸಲಿದೆ ಮತ್ತು ಇಸ್ರೇಲ್ ಮೇಲೆ ದಾಳಿ ನಡೆಸದೆ ಇರಲು ಹಿಜ್ಬುಲ್ಲಾ ಒಪ್ಪಿದೆ ಎಂದು ಟ್ರಂಪ್ ಹೇಳಿದ್ದಾರೆ. ಲೆಬನಾನ್ನಲ್ಲಿ ಇಸ್ರೇಲ್ ಮಿಲಿಟರಿಯ ಕ್ರಮಗಳು ಅಮೆರಿಕ-ಇರಾನ್ ಕದನ ವಿರಾಮಕ್ಕೆ ಬೆದರಿಕೆಯಾಗಿದೆ ಎಂದು ಇರಾನ್ ಎಚ್ಚರಿಕೆ ನೀಡಿತ್ತು.
ಬೈರೂತ್ಗೆ ಯಾವುದೇ ಪಡೆಗಳು ಹೋಗುವುದಿಲ್ಲ, ಮತ್ತು ಅಲ್ಲಿರುವ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆಗೆ ಫೋನಿನಲ್ಲಿ ನಡೆಸಿದ `ಫಲಪ್ರದ ಮಾತುಕತೆಯ' ಬಳಿಕ ಟ್ರಂಪ್ ಘೋಷಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲಿ ಪ್ರಧಾನಿ ನೆತನ್ಯಾಹು ಒಪ್ಪಂದವನ್ನು ದೃಢಪಡಿಸಿದ್ದಾರೆ. ಆದರೆ, `ನಮ್ಮ ನಗರಗಳು ಹಾಗೂ ನಾಗರಿಕರ ಮೇಲೆ ದಾಳಿ ನಡೆಸುವುದನ್ನು ಹಿಜ್ಬುಲ್ಲಾ ನಿಲ್ಲಿಸದಿದ್ದರೆ ಬೈರೂತ್ ಮೇಲಿನ ದಾಳಿ ಮುಂದುವರಿಯಲಿದೆ. ಇಸ್ರೇಲಿ ಪಡೆಗಳು ಇನ್ನೂ ದಕ್ಷಿಣ ಲೆಬನಾನ್ನಲ್ಲಿ ಕಾರ್ಯನಿರ್ವಹಿಸುತ್ತಿವೆ' ಎಂದವರು ಹೇಳಿದ್ದಾರೆ.
ಇಸ್ರೇಲ್, ಹಿಜ್ಬುಲ್ಲಾ ನಡುವೆ ಮುಂದುವರಿದ ಘರ್ಷಣೆ
ಲೆಬನಾನ್ ಮತ್ತು ಇಸ್ರೇಲ್ ನಡುವೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಶಾಂತಿ ಮಾತುಕತೆಗೂ ಮುನ್ನ ಹೋರಾಟ ಸ್ಥಗಿತಗೊಳಿಸಲು ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಮ್ಮತಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರೂ, ಸೋಮವಾರ ತಡರಾತ್ರಿಯಿಂದ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ತೀವ್ರ ಘರ್ಷಣೆ ಮುಂದುವರಿದಿದೆ ಎಂದು ವರದಿಯಾಗಿದೆ.
ಲೆಬನಾನ್ನಿಂದ ಪ್ರಯೋಗಿಸಲಾದ ಎರಡು ಡ್ರೋನ್ಗಳನ್ನು ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಮಂಗಳವಾರ ಹೇಳಿದೆ. ಉತ್ತರ ಇಸ್ರೇಲ್ನ ಹಲವು ಪ್ರದೇಶಗಳಲ್ಲಿ ಸೈರನ್ ಮೊಳಗಿಸಿದ ಬಳಿಕ, ಲೆಬನಾನ್ನಿಂದ ಇಸ್ರೇಲ್ನ ಪ್ರದೇಶದತ್ತ ಪ್ರಯೋಗಿಸಲಾದ ಎರಡು ಡ್ರೋನ್ಗಳನ್ನು ಇಸ್ರೇಲ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಮಿಲಿಟರಿಯ ಹೇಳಿಕೆ ತಿಳಿಸಿದೆ.
ದಕ್ಷಿಣ ಲೆಬನಾನ್ನ ಹದ್ದಥಾ ಮತ್ತು ಬಯಾದಾ ನಗರಗಳಲ್ಲಿ ಇಸ್ರೇಲಿ ಟ್ಯಾಂಕ್ಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಫಿರಂಗಿ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ. ದಕ್ಷಿಣ ಲೆಬನಾನ್ನ ಹಲವು ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು ಡೆಬ್ಬೈನ್ ನಗರದಲ್ಲಿ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿದೆ ಎಂದು ಲೆಬನಾನ್ನ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.






