ಚುನಾವಣೆ ಹೊಸ್ತಿಲಲ್ಲಿ ವೆಸ್ಟ್ ಬ್ಯಾಂಕ್ ಗೆ ಇಸ್ರೇಲ್ ದಿಗ್ಬಂಧನ
ಹೆಬ್ರಾನ್ ನಲ್ಲಿ 2,200 ಫೆಲೆಸ್ತೀನಿಯನ್ನರ ಬಲವಂತದ ಸ್ಥಳಾಂತರ; ಎಲ್ಲ ಗಡಿದಾಟು ಮಾರ್ಗಗಳೂ ಬಂದ್

Photo credit : aljazeera
ಟೆಲ್ ಅವೀವ್, ಅ. 26: ಇಸ್ರೇಲ್ ನಲ್ಲಿ ಮಂಗಳವಾರ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಆಕ್ರಮಿತ ವೆಸ್ಟ್ ಬ್ಯಾಂಕ್ ನೊಂದಿಗಿನ ಎಲ್ಲ ಭೂ ಗಡಿದಾಟು ಮಾರ್ಗಗಳನ್ನು ಮುಚ್ಚುವುದಾಗಿ ಇಸ್ರೇಲ್ ಘೋಷಿಸಿದೆ. ಹೆಬ್ರಾನ್ ನಲ್ಲಿ ದಿಗ್ಬಂಧನ ವಿಧಿಸಿ ಸಾವಿರಾರು ಫೆಲೆಸ್ತೀನಿಯನ್ನರನ್ನು ಮನೆಗಳಿಂದ ಬಲವಂತವಾಗಿ ಸ್ಥಳಾಂತರಿಸಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟವಾಗಿದೆ ಎಂದು Aljazeera ವರದಿ ಮಾಡಿದೆ.
ರವಿವಾರದಿಂದ ಸೋಮವಾರದವರೆಗೆ ವೆಸ್ಟ್ ಬ್ಯಾಂಕ್ ನ ಬಹುತೇಕ ಪ್ರದೇಶಗಳಿಗೆ ಫೆಲೆಸ್ತೀನಿಯನಿನ ಕಾರ್ಮಿಕರ ಪ್ರವೇಶವನ್ನು ನಿರ್ಬಂಧಿಸಲಾಗುವುದು. ಮಂಗಳವಾರ ಮತದಾನದ ದಿನದಂದು ಪ್ರದೇಶದ ಒಳಗೆ ಮತ್ತು ಹೊರಗೆ ಸಂಚರಿಸುವ ಎಲ್ಲ ಭೂ ಗಡಿದಾಟು ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಇಸ್ರೇಲಿ ಸೇನೆ ರವಿವಾರ ತಿಳಿಸಿದೆ.
ಶುಕ್ರವಾರ ಹೆಬ್ರಾನ್ ನಲ್ಲಿ ಇಬ್ಬರು ಫೆಲೆಸ್ತೀನಿನ ಬಂದೂಕುಧಾರಿಗಳು ಇಸ್ರೇಲಿ ಸೇನೆಯ ಮೀಸಲು ನೆಲೆಯ ಮೇಲೆ ದಾಳಿ ನಡೆಸಿ ಇಬ್ಬರು ಇಸ್ರೇಲಿ ಸೈನಿಕರನ್ನು ಹತ್ಯೆಗೈದಿದ್ದರು. ಈ ದಾಳಿಯಲ್ಲಿ ಇಬ್ಬರು ಫೆಲೆಸ್ತೀನಿಯನ್ನರೂ ಮೃತಪಟ್ಟಿದ್ದರು. ಬಳಿಕ ಇಸ್ರೇಲ್ ನೂರಾರು ದಾಳಿಗಳನ್ನು ನಡೆಸಿದೆ.
ದಾಳಿಯ ಬೆನ್ನಲ್ಲೇ ಪ್ರಧಾನಿ ಬೆಂಜಮಿನ್ ನೆತನ್ಯಾಹು ವೆಸ್ಟ್ ಬ್ಯಾಂಕ್ ನಲ್ಲಿ ‘ಸಂಪೂರ್ಣ ದಿಗ್ಬಂಧನ’ ವಿಧಿಸುವಂತೆ ಆದೇಶಿಸಿದ್ದರು. ಸುಮಾರು 2,000 ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ದೃಢಪಡಿಸಿದ್ದರು.
‘ಹೆಬ್ರಾನ್ ನಲ್ಲಿರುವ ಹಮಾಸ್ ನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವವರೆಗೆ ಸ್ಥಳಾಂತರಗೊಂಡವರನ್ನು ಅವರ ನೆರೆಹೊರೆಗಳಿಗೆ ಮರಳಲು ಬಿಡುವುದಿಲ್ಲ’ ಎಂದು ಕಾಟ್ಜ್ ಸರಕಾರಿ ಸುದ್ದಿ ಸಂಸ್ಥೆ ಕಾನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮನೆಗಳಿಂದ ಜನರ ತೆರವು :
ಹೆಬ್ರಾನ್ ನಗರ ಮತ್ತು ಸುತ್ತಮುತ್ತಲಿನ ಹಲವು ಹಳ್ಳಿಗಳನ್ನು ಸಂಪೂರ್ಣವಾಗಿ ದಿಗ್ಬಂಧನಕ್ಕೆ ಒಳಪಡಿಸಲಾಗಿದೆ ಎಂದು ನಗರದ ಮೇಯರ್ ಯೂಸೆಫ್ ಅಲ್-ಜಬರಿ Aljazeera ಗೆ ತಿಳಿಸಿದ್ದಾರೆ. ಇಸ್ರೇಲಿ ಸೈನಿಕರ ಕಾರ್ಯಾಚರಣೆ ಮತ್ತು ದಾಳಿಗಳಿಂದಾಗಿ 2,200 ಜನರನ್ನು ಮನೆಗಳಿಂದ ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು ಅವರು ಶನಿವಾರ ಹೇಳಿದ್ದಾರೆ.
ಇಸ್ರೇಲಿ ಯಂತ್ರೋಪಕರಣಗಳು ಹೆಬ್ರಾನ್ ನಲ್ಲಿರುವ ಫೆಲೆಸ್ತೀನಿಯನ್ನರ ಮನೆಗಳನ್ನು ಕೆಡವಿವೆ. ಸೈನಿಕರು ತಡರಾತ್ರಿ ಧ್ವನಿವರ್ಧಕಗಳ ಮೂಲಕ ಸ್ಥಳಾಂತರದ ಆದೇಶಗಳನ್ನು ಪ್ರಕಟಿಸಿದ್ದರಿಂದ ನಿವಾಸಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಸಮಯ ಸಿಗಲಿಲ್ಲ. ಸುರಕ್ಷಿತವಾಗಿ ತೆರಳಲು ಸೂಕ್ತ ಸ್ಥಳಗಳೂ ಕಡಿಮೆ ಇದ್ದವು ಎಂದು ಫೆಲೆಸ್ತೀನಿನ ಪ್ರಾಧಿಕಾರ (ಪಿಎ) ತಿಳಿಸಿದೆ.
ಹೆಬ್ರಾನ್ ಮತ್ತು ವೆಸ್ಟ್ ಬ್ಯಾಂಕ್ ನ ಕೆಲವು ಭಾಗಗಳನ್ನು ಆಡಳಿತಾತ್ಮಕವಾಗಿ ನಿಯಂತ್ರಿಸುವ ಪಿಎ, ನಿವಾಸಿಗಳ ರಕ್ಷಣೆಗೆ ಇಸ್ರೇಲ್ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೇರಬೇಕು ಎಂದು ಆಗ್ರಹಿಸಿದೆ. ಮನೆಗಳ ನೆಲಸಮ, ಇಡೀ ನೆರೆಹೊರೆಗಳ ಬಲವಂತದ ಸ್ಥಳಾಂತರ ಹಾಗೂ ಫೆಲೆಸ್ತೀನಿನ ನಗರಗಳ ಮುಚ್ಚುವಿಕೆ ಮತ್ತು ಮುತ್ತಿಗೆಯನ್ನು ಉಲ್ಲೇಖಿಸಿರುವ ಪಿಎ, ಇಸ್ರೇಲ್ ನ ಕ್ರಮಗಳನ್ನು ‘ಸಾಮೂಹಿಕ ಶಿಕ್ಷೆ’ ಎಂದು ಖಂಡಿಸಿದೆ.
ಹೆಬ್ರಾನ್ ನಗರದಲ್ಲಿ ಸುಮಾರು 2 ಲಕ್ಷ ಫೆಲೆಸ್ತೀನಿಯನ್ನರು ವಾಸಿಸುತ್ತಿದ್ದಾರೆ. ಹೆಬ್ರಾನ್ ಆಡಳಿತ ಪ್ರದೇಶದಲ್ಲಿ ಇನ್ನೂ ಸುಮಾರು 6 ಲಕ್ಷ ಜನರಿದ್ದಾರೆ. ಇದು ವೆಸ್ಟ್ ಬ್ಯಾಂಕ್ ನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲೊಂದು.
ಹೆಬ್ರಾನ್ ನಲ್ಲಿನ ಕಾರ್ಯಾಚರಣೆ ಹಲವು ದಿನಗಳವರೆಗೆ ಮುಂದುವರಿಯಲಿದೆ ಎಂದು ಇಸ್ರೇಲಿ ಸೇನೆ ತಿಳಿಸಿದೆ. 1967ರಲ್ಲಿ ವೆಸ್ಟ್ ಬ್ಯಾಂಕ್ ಅನ್ನು ವಶಪಡಿಸಿಕೊಂಡ ಬಳಿಕ ಕಾಣದಂತಹ ಬೃಹತ್ ಪ್ರಮಾಣದ ಕಾರ್ಯಾಚರಣೆ ನಡೆಸಲು ಯೋಜಿಸಿರುವುದಾಗಿ ಹೇಳುವ ಮೂಲಕ ನೆತನ್ಯಾಹು ಇನ್ನಷ್ಟು ಕಠಿಣ ಕ್ರಮಗಳ ಸುಳಿವು ನೀಡಿದ್ದಾರೆ.
ಇಸ್ರೇಲ್ ನಲ್ಲಿ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿರುವ ನೆತನ್ಯಾಹು, ಮಂಗಳವಾರದ ಚುನಾವಣೆಯಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಪ್ರಾದೇಶಿಕ ಮಿಲಿಟರಿ ಸಂಘರ್ಷಗಳು ಮತ್ತು ರಾಷ್ಟ್ರೀಯ ಭದ್ರತೆಯ ಕುರಿತ ಆತಂಕಗಳನ್ನು ತಮ್ಮ ಮರುಚುನಾವಣಾ ಪ್ರಚಾರಕ್ಕೆ ಪೂರಕವಾಗಿ ಬಳಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.






