ಅಲ್-ಶಿಫಾ ಆಸ್ಪತ್ರೆಯಿಂದ ತೆರಳಲು ಇಸ್ರೇಲ್ ಸೂಚನೆ
► ಕಾಲ್ನಡಿಗೆಯಲ್ಲಿ ಓಡಿದ ರೋಗಿಗಳು, ಸಿಬ್ಬಂದಿ ► ಆಸ್ಪತ್ರೆಯಲ್ಲೇ ಉಳಿದ 450 ರೋಗಿಗಳು

Photo: aljazeera.com
ಗಾಝಾ: ಇಸ್ರೇಲ್-ಹಮಾಸ್ ನಡುವಿನ ಯುದ್ಧದಲ್ಲಿ 2,000ಕ್ಕೂ ಹೆಚ್ಚು ರೋಗಿಗಳು, ವೈದ್ಯರು ಮತ್ತು ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಅಲ್-ಶಿಫಾ ಆಸ್ಪತ್ರೆಯನ್ನು ತೆರವುಗೊಳಿಸುವಂತೆ ಇಸ್ರೇಲ್ ಸೇನೆ ಶನಿವಾರ ಆದೇಶಿಸಿದ ಬಳಿಕ ನೂರಾರು ಜನರು ಕಾಲ್ನಡಿಗೆಯಲ್ಲಿ ಆಸ್ಪತ್ರೆಯಿಂದ ಧಾವಿಸಿದ್ದಾರೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಆಸ್ಪತ್ರೆ ತೆರವುಗೊಳಿಸಿ ದಕ್ಷಿಣ ಗಾಝಾಕ್ಕೆ ತೆರಳುವಂತೆ ಇಸ್ರೇಲ್ ಆದೇಶಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದ ರೋಗಿಗಳು, ವೈದ್ಯಕೀಯ ಸಿಬಂದಿ ಹಾಗೂ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದವರು ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಈ ಮಧ್ಯೆ ತೀವ್ರ ಅನಾರೋಗ್ಯಗೊಂಡಿರುವ ಸುಮಾರು 450 ರೋಗಿಗಳು ಆಸ್ಪತ್ರೆಯಲ್ಲೇ ಉಳಿದಿದ್ದಾರೆ ಎಂದು ವರದಿಯಾಗಿದೆ.
ಅಲ್-ಶಿಫಾ ಆಸ್ಪತ್ರೆಯ ಅಡಿಯಲ್ಲಿ ಹಮಾಸ್ನ ಕಾರ್ಯಾಚರಣಾ ನೆಲೆಯಿದೆ ಎಂದು ಇಸ್ರೇಲ್ ಪ್ರತಿಪಾದಿಸಿದ್ದು ಇದನ್ನು ಹಮಾಸ್ ನಿರಾಕರಿಸಿದೆ. ರೋಗಿಗಳು, ಗಾಯಗೊಂಡವರು, ಆಶ್ರಯ ಪಡೆದವರು ಹಾಗೂ ವೈದ್ಯಕೀಯ ಸಿಬಂದಿ ಕಾಲ್ನಡಿಗೆಯಲ್ಲೇ ಸಮುದ್ರತೀರದತ್ತ ತೆರಳುವುದನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಪಡೆಗಳು ಸೂಚಿಸಿವೆ ಎಂದು ಆಸ್ಪತ್ರೆಯ ನಿರ್ದೇಶಕ ಮುಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ. ಶನಿವಾರ ಬೆಳಿಗ್ಗೆ ಗಾಝಾ ನಗರದಲ್ಲಿ ಲೌಡ್ ಸ್ಪೀಕರ್ಗಳ ಮೂಲಕ ಘೋಷಣೆ ಮಾಡಿದ ಇಸ್ರೇಲ್ ಸೇನೆ `ಒಂದು ಗಂಟೆಯೊಳಗೆ ಆಸ್ಪತ್ರೆಯನ್ನು ತೆರವುಗೊಳಿಸುವಂತೆ ಆದೇಶಿಸಿದೆ.
ಇಸ್ರೇಲ್ ಪಡೆಗಳು ಬುಧವಾರ ಅಲ್-ಶಿಫಾ ಆಸ್ಪತ್ರೆಯೊಳಗೆ ಪ್ರವೇಶಿಸುವುದಕ್ಕೂ ಮುನ್ನ ಆಸ್ಪತ್ರೆಯಲ್ಲಿ ರೋಗಿಗಳು, ಸಿಬಂದಿ, ಸ್ಥಳಾಂತರಿತ ಫೆಲೆಸ್ತೀನೀಯರ ಸಹಿತ ಸುಮಾರು 2,300 ಜನರಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ.







