ಲೆಬನಾನ್ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್| ಬೈರೂತ್ನಲ್ಲಿ ಮೃತರ ಸಂಖ್ಯೆ 200ಕ್ಕೆ ಏರಿಕೆ

Photo Credit : PTI , AP
ಬೈರೂತ್ ಎ.9: ಲೆಬನಾನ್ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ ಇರಾನ್ ಜೊತೆ ಅಮೆರಿಕ ಏರ್ಪಡಿಸಿಕೊಂಡಿರುವ ಎರಡು ವಾರಗಳ ಕದನವಿರಾಮ ಭವಿಷ್ಯದ ಬಗ್ಗೆ ಆತಂಕ ಆವರಿಸಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ನಿರ್ಬಂಧವನ್ನು ಮುಂದುವರಿಸಿರುವುದರಿಂದ ಶುಕ್ರವಾರ ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಶಾಂತಿಮಾತುಕತೆ ಸಫಲವಾಗುವ ಬಗ್ಗೆ ಸಂದೇಹಗಳು ಉದ್ಬವಿಸಿರುವುದಾಗಿ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ತಿಳಿಸಿದ್ದಾರೆ.
ಇರಾನ್ ಜೊತೆ ಕದನವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಕೆಲವೇ ತಾಸುಗಳ ಬಳಿಕ ಇಸ್ರೇಲ್, ಲೆಬನಾನ್ನ ವಿವಿಧೆಡೆ ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿದ್ದು , ರಾಜಧಾನಿ ಬೈರೂತ್ನಲ್ಲಿಯೇ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಹಿಝ್ಬುಲ್ಲಾ ಭದ್ರಕೋಟೆಯಾಗಿರುವ ಬೈರೂತ್ ನಗರ ಸಮೀಪದ ಗ್ರಾಮಾಂತರ ಪ್ರದೇಶಗಳ ಮೇಲೂ ಇಸ್ರೇಲ್ ವ್ಯಾಪಕ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ.
ಲೆಬನಾನ್ ಮೇಲಿನ ದಾಲಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರೆಸ್ ಹೇಳಿಕೆಯೊಂದರಲ್ಲಿ ಬಲವಾಗಿ ಖಂಡಿಸಿದ್ದಾರೆ. ಲೆಬನಾನ್ನಲ್ಲಿ ಪ್ರಸಕ್ತ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಕದನವಿರಾಮವನ್ನು ಅಪಾಯಕ್ಕೆ ದೂಡಿದೆಯೆಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ ಇರಾನ್ ಜೊತೆ ಏರ್ಪಡಿಸಲಾಗಿರುವ ಕದನವಿರಾಮದಲ್ಲಿ ಲೆಬನಾನ್ ಒಳಗೊಂಡಿಲ್ಲವೆಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೊನ್ ತಿಳಿಸಿದ್ದಾರೆ.
ಇರಾನ್ ಬೆಂಬಲಿತ ಹಿಜ್ಭುಲ್ಲಾ ಬಂಡುಕೋರರ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ಇಸ್ರೇಲ್ ಸತತವಾಗಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೆ 2 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 5 ಸಾವಿರ ಮಂದಿ ಗಾಯಗೊಂಡಿದ್ದಾರೆ.
ಗುರುವಾರವೂ ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಸೇನೆ ದಾಳಿಗಳನ್ನು ನಡೆಸಿದ್ದು, ಟೈರೆ ನಗರದ ಪಕ್ಕದ ಗ್ರಾಮವಾದ ಅಬಾಸ್ಸಿಯೆಹ್ನಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ.







