ತೀವ್ರಗೊಂಡ ಇಸ್ರೇಲ್- ಇರಾನ್ ಸಂಘರ್ಷ: ಸುರಕ್ಷಿತ ತಾಣಗಳಿಗೆ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ

PC: x.com/ani_digital
ಟೆಹರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡ ಬೆನ್ನಲ್ಲೇ ಇರಾನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ದೇಶದ ಒಳಗೆಯೇ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಜತೆಗೆ ಕಾರ್ಯಸಾಧು ಎನಿಸುವ ಇತರ ಆಯ್ಕೆಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಭಾರತ ಸೋಮವಾರ ಪ್ರಕಟಿಸಿದೆ.
ಉಭಯ ದೇಶಗಳ ನಡುವೆ ಕ್ಷಿಪಣಿ ದಾಳಿ- ಪ್ರತಿದಾಳಿ ನಡೆಯುತ್ತಿದ್ದು, ನಿಲ್ಲುವ ಸೂಚನೆ ಕಾಣದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
"ಟೆಹರಾನ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಭದ್ರತಾ ವ್ಯವಸ್ಥೆ ಮೇಲೆ ತೀವ್ರ ನಿಗಾ ಇರಿಸಿದ್ದು, ಇರಾನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸಲು ಕ್ರಮ ಕೈಗೊಂಡಿದೆ. ಕೆಲ ಪ್ರಕರಣಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದ್ದು, ಇರಾನ್ನ ಒಳಗೆಯೇ ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗಿದೆ. ಕಾರ್ಯಸಾಧು ಎನಿಸುವ ಇತರ ಆಯ್ಕೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ವಿದೇಶಾಂಗ ವಯವಹಾರಗಳ ಸಚಿವಾಲಯದ ಪ್ರಕಟಣೆ ಹೇಳಿದೆ.
ಇರಾನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇರಾನ್ನಲ್ಲಿ ಅಧ್ಯಯನ ನಡೆಸುತ್ತಿರುವ ಸುಮಾರು 1500 ಮಂದಿ ಭಾರತೀಯ ವಿದ್ಯಾರ್ಥಿಗಳು ಈ ಸಂಘರ್ಷದಿಂದ ಅತಂತ್ರರಾಗಿದ್ದಾರೆ.





