ಇಸ್ರೇಲ್–ಇರಾನ್ ಕದನ ವಿರಾಮಕ್ಕೆ ಸಿದ್ಧ; ಶಾಂತಿ ಮಾತುಕತೆ ಅಂತಿಮ ಹಂತದಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ನ್ಯೂಜೆರ್ಸಿ: ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳು ತಕ್ಷಣದ ಕದನ ವಿರಾಮಕ್ಕೆ ಸಿದ್ಧವಾಗಿದ್ದು, ಶಾಂತಿ ಸ್ಥಾಪನೆಗೆ ಸಂಬಂಧಿಸಿದ ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಷಿಯಲ್’ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ‘ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳು ತಕ್ಷಣ ಒಪ್ಪಂದಕ್ಕೆ ಸಹಿ ಹಾಕಲು ಬಯಸುತ್ತಿವೆ. ಶಾಂತಿ ಕುರಿತ ಅಂತಿಮ ಮಾತುಕತೆಗಳು ನಡೆಯುತ್ತಿವೆ. ಯಾವುದೇ ಅನಿರೀಕ್ಷಿತ ಬೆಳವಣಿಗೆ ಸಂಭವಿಸದಿದ್ದರೆ ಒಪ್ಪಂದ ಶೀಘ್ರವೇ ಅಂತಿಮಗೊಳ್ಳಲಿದೆ. ಅಂತಿಮ ಒಪ್ಪಂದವಾಗುವವರೆಗೆ ದಿಗ್ಬಂಧನ ಮುಂದುವರಿಯಲಿದ್ದು, ಅದು ಸಂಪೂರ್ಣ ಪರಿಣಾಮಕಾರಿಯಾಗಿ ಜಾರಿಯಲ್ಲಿರುತ್ತದೆ’ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಉಭಯ ದೇಶಗಳು ಪರಸ್ಪರ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಟ್ರಂಪ್ ಆಗ್ರಹಿಸಿದ್ದರು. ‘ಇಸ್ರೇಲ್ ಮತ್ತು ಇರಾನ್ ತಕ್ಷಣವೇ ಗುಂಡಿನ ದಾಳಿ ನಿಲ್ಲಿಸಬೇಕು’ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.






