ಗಾಝಾ | ನೆರವು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ನಿಂದ ದಾಳಿ: 60 ಫೆಲೆಸ್ತೀನ್ ನಾಗರಿಕರು ಮೃತ್ಯು

Photo credit: PTI
ಗಾಝಾ : ಕಳೆದ 24ಗಂಟೆಗಳಲ್ಲಿ ಗಾಝಾದ ನೆರವು ಕೇಂದ್ರ ಸೇರಿದಂತೆ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಗೆ 60 ಮಂದಿ ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಗಾಝಾದ ಅಲ್-ರಶೀದ್ ಅಲ್-ಸಾಹಿಲಿ ಬೀದಿಯಲ್ಲಿರುವ ನಬುಲ್ಸಿ ಜಂಕ್ಷನ್, ಅಲ್-ಶಿಫಾ ಆಸ್ಪತ್ರೆ ಸುತ್ತಮುತ್ತ ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಗಾಝಾದ ಶುಜಾಯೆಯಾ ನಗರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ವೈದ್ಯರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ರಫಾದ ಶಕೌಶ್ ಮತ್ತು ಅಲ್ ಆಲಮ್ ಪ್ರದೇಶಗಳಲ್ಲಿ ಇಸ್ರೇಲ್ ಮತ್ತು ಯುಎಸ್ ಬೆಂಬಲಿತ ನೆರವು ವಿತರಣಾ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ನೆರವು ಕೇಂದ್ರದ ಸಮೀಪದ ಪ್ರದೇಶದ ಮೇಲೆ ನಡೆಸಿದ ಪ್ರತ್ಯೇಕ ವಾಯುದಾಳಿಯಲ್ಲಿ ಇನ್ನೂ ಮೂವರು ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ದಾಳಿಯಲ್ಲಿ ಈವರೆಗೆ ಮಹಿಳೆಯರು, ಮಕ್ಕಳು ಸೇರಿದಂತೆ 54,927 ನಾಗರಿಕರು ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಗಾಝಾ ನಗರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪತ್ರಕರ್ತ ಮುಹಮ್ಮದ್ ಅಬು ಅಲ್-ಔಫ್ ಮೃತಪಟ್ಟಿದ್ದಾರೆ. ಅಬು ಅಲ್-ಔಫ್ ಹಲವಾರು ಮಾಧ್ಯಮಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇಸ್ರೇಲ್ ದಾಳಿಗೆ ಈವರೆಗೆ 227 ಪತ್ರಕರ್ತರು ಗಾಝಾದಲ್ಲಿ ಮೃತಪಟ್ಟಿದ್ದಾರೆ ಎಂದು ಗಾಝಾದಲ್ಲಿರುವ ಸರಕಾರಿ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.