ದಾಳಿಗಳನ್ನು ತಕ್ಷಣ ನಿಲ್ಲಿಸುವಂತೆ ಟ್ರಂಪ್ ಆದೇಶಕ್ಕೆ ಇಸ್ರೇಲ್ ʼಡೋಂಟ್ ಕೇರ್ʼ: ದಕ್ಷಿಣ ಗಾಝಾದಲ್ಲಿ ಇಬ್ಬರು ಮಕ್ಕಳ ಸಹಿತ ಏಳು ಫೆಲೆಸ್ತೀನಿಯರ ಹತ್ಯೆ

File Photo: PTI
ಪಶ್ಚಿಮ ದಂಡೆ: ಫೆಲೆಸ್ತೀನಿ ಗುಂಪು ಹಮಾಸ್ ತನ್ನ ಕದನ ವಿರಾಮ ಪ್ರಸ್ತಾವವನ್ನು ಭಾಗಶಃ ಒಪ್ಪಿಕೊಂಡ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನಾಂಗೀಯ ಯುದ್ಧವನ್ನು ನಿಲ್ಲಿಸುವಂತೆ ನಿರ್ದೇಶಿಸಿದ್ದರೂ ಇಸ್ರೇಲ್ ಶುಕ್ರವಾರ ಗಾಝಾದಲ್ಲಿ ತನ್ನ ದಾಳಿಗಳನ್ನು ಮುಂದುವರಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದಾರೆ.
ಅದು ಅತ್ಯಂತ ಹಿಂಸಾತ್ಮಕ ರಾತ್ರಿಯಾಗಿತ್ತು. ಬಾಂಬ್ ದಾಳಿಗಳನ್ನು ನಿಲ್ಲಿಸುವಂತೆ ಟ್ರಂಪ್ ಕರೆ ನೀಡಿದ್ದರೂ ಇಸ್ರೇಲಿ ಸೇನೆಯು ರಾತ್ರಿಯಿಡೀ ಗಾಝಾ ನಗರ ಮತ್ತು ಪಶ್ಚಿಮ ದಂಡೆಯ ಇತರ ಪ್ರದೇಶಗಳಲ್ಲಿ ಡಝನ್ಗಟ್ಟಲೆ ವಾಯು ದಾಳಿಗಳನ್ನು ಮತ್ತು ಫಿರಂಗಿ ಶೆಲ್ ದಾಳಿಗಳನ್ನು ನಡೆಸಿದೆ ಎಂದು ನಾಗರಿಕ ರಕ್ಷಣಾ ವಕ್ತಾರ ಮಹ್ಮೂದ್ ಬಸಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಈ ದಾಳಿಗಳಲ್ಲಿ 20 ಮನೆಗಳು ಧ್ವಂಸಗೊಂಡಿವೆ ಎಂದೂ ಅವರು ಹೇಳಿದರು.
ಎಕ್ಸ್ ಪೋಸ್ಟ್ನಲ್ಲಿ ದಾಳಿಗಳನ್ನು ದೃಢಪಡಿಸಿರುವ ಇಸ್ರೇಲ್, ಗಾಝಾ ನಗರದ ಮೇಲೆ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಬೆದರಿಕೆಯೊಡ್ಡಿದೆ.
ಐಡಿಎಫ್(ಇಸ್ರೇಲಿ ಮಿಲಿಟರಿ) ಪಡೆಗಳು ಈಗಲೂ ಗಾಝಾ ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಮತ್ತು ಅಲ್ಲಿಗೆ ವಾಪಸಾಗುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಸೇನೆಯ ವಕ್ತಾರ ಕರ್ನಲ್ ಅವಿಚೆ ಅಡ್ರಯೆ ಎಕ್ಸ್ನಲ್ಲಿ ಫೆಲೆಸ್ತೀನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗಾಝಾದಲ್ಲಿ ಹಮಾಸ್ನ ವಶದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಕುಟುಂಬಗಳು ತಕ್ಷಣ ಕದನ ವಿರಾಮಕ್ಕೆ ಕರೆ ನೀಡಿದ ಬೆನ್ನಲ್ಲೇ ಈ ದಾಳಿಗಳು ನಡೆದಿವೆ.
ಈ ನಡುವೆ ಹಮಾಸ್ ಶನಿವಾರ, ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವದಡಿ ಎಲ್ಲ ಬಾಕಿಯಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆಗಳನ್ನು ಆರಂಭಿಸಲು ತಾನು ಸಿದ್ಧವಿರುವುದಾಗಿ ಹೇಳಿದೆ.
ಟ್ರಂಪ್ ಮಂಡಿಸಿರುವ ಕದನ ವಿರಾಮ ಯೋಜನೆಯ ಹಲವಾರು ಅಂಶಗಳನ್ನು ತಾನು ಒಪ್ಪಿಕೊಂಡಿರುವುದಾಗಿ ಹಮಾಸ್ ಶುಕ್ರವಾರ ತಿಳಿಸಿತ್ತು. ಆದರೆ ಈ ಪ್ರಸ್ತಾವವು ಫೆಲೆಸ್ತೀನಿಗಳಿಗೆ ಅನುಕೂಲಕರವಾಗಿಲ್ಲ ಎಂದು ತಜ್ಞರು ಬೆಟ್ಟು ಮಾಡಿದ್ದಾರೆ.
ತನ್ನ ಕದನ ವಿರಾಮ ಪ್ರಸ್ತಾವಕ್ಕೆ ಹಮಾಸ್ನ ಪ್ರತಿಕ್ರಿಯೆಯನ್ನು ಸ್ವಾಗತಿಸಿರುವ ಟ್ರಂಪ್, ಅವರು ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂದು ತಾನು ಭಾವಿಸಿರುವುದಾಗಿ ಹೇಳಿದ್ದಾರೆ.
ಗಾಝಾದಲ್ಲಿ ಜನಾಂಗೀಯ ಹತ್ಯೆಗಳನ್ನು ನಿಲ್ಲಿಸುವಂತೆ ಇಸ್ರೇಲ್ಗೆ ಆದೇಶ ನೀಡಿರುವ ಟ್ರಂಪ್, ‘ನಾವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಹೊರತರುವಂತಾಗಲು ಇಸ್ರೇಲ್ ಗಾಝಾದ ಮೇಲೆ ಬಾಂಬ್ ದಾಳಿಯನ್ನು ತಕ್ಷಣ ನಿಲ್ಲಿಸಬೇಕು. ಸದ್ಯ ಒತ್ತೆಯಾಳುಗಳ ಬಿಡುಗಡೆ ಪ್ರಯತ್ನ ಅಪಾಯಕಾರಿಯಾಗಿದ್ದು, ನಾವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಚರ್ಚಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಟ್ರಂಪ್ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಇಸ್ರೇಲ್ ಸಿದ್ಧವಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಒತ್ತೆಯಾಳುಗಳ ಬಿಡುಗಡೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಶುಕ್ರವಾರ ಹೇಳಿದ್ದಾರೆ.
ಟ್ರಂಪ್ ಯೋಜನೆಗೆ ಹಮಾಸ್ ಪ್ರತಿಕ್ರಿಯೆಯನ್ನು ವಿಶ್ವನಾಯಕರು ಸ್ವಾಗತಿಸಿದ್ದಾರೆ. ಇಸ್ರೇಲ್ ಕಳೆದ ಎರಡು ವರ್ಷಗಳಿಂದ ಫೆಲೆಸ್ತೀನಿಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಅವರು ಪ್ರಶಂಸಿಸಿದ್ದಾರೆ.







