ಗಾಝಾದಲ್ಲಿ ಇಸ್ರೇಲ್ ನಿಂದ ವಾಯುದಾಳಿ: ಹಮಾಸ್ ನ ಹಿರಿಯ ಕಮಾಂಡರ್ ಮೃತ್ಯು

ಸಮೀರ್ ಅಬು ಯೂನಿಸ್ (Photo: NDTV)
ಖಾನ್ ಯೂನಿಸ್: ದಕ್ಷಿಣ ಗಾಝಾದ ಖಾನ್ ಯೂನಿಸ್ ನ ಅಲ್-ಮವಾಸಿ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಮಾಸ್ ನ ರಫಾ ಬ್ರಿಗೇಡ್ ಕಮಾಂಡರ್ ಸಮೀರ್ ಅಬು ಯೂನಿಸ್ ಮೃತಪಟ್ಟಿದ್ದಾರೆ ಎಂದು ಹಮಾಸ್ ದೃಢಪಡಿಸಿದೆ.
ಶನಿವಾರ ಡ್ರೋನ್ ಮೂಲಕ ದಾಳಿ ನಡೆಸಿ ಹಮಾಸ್ ನ ಹಿರಿಯ ಮಿಲಿಟರಿ ಕಮಾಂಡರ್ ಒಬ್ಬರನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ಮತ್ತು ಅದರ ಭದ್ರತಾ ಸಂಸ್ಥೆ 'ಶಿನ್ ಬೆಟ್' ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ನಿರಾಶ್ರಿತರು ಆಶ್ರಯ ಪಡೆದಿದ್ದ ಡೇರೆಯೊಂದರ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾನ್ ಯೂನಿಸ್ ನ ನಾಸರ್ ವೈದ್ಯಕೀಯ ಸಂಕೀರ್ಣಕ್ಕೆ ಸಾಗಿಸಲಾಗಿದೆ ಎಂದು ವೈದ್ಯಕೀಯ ಸಿಬ್ಬಂದಿ ಶನಿವಾರ Aljazeera ಗೆ ತಿಳಿಸಿದ್ದಾರೆ.
ಆಸ್ಪತ್ರೆಯ ಸಮೀಪದಿಂದ ಫೆಲೆಸ್ತೀನ್ ನ ಪತ್ರಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವೀಡಿಯೊ ದೃಶ್ಯಾವಳಿಗಳನ್ನು Aljazeera ಪರಿಶೀಲಿಸಿದೆ. ಅವುಗಳಲ್ಲಿ ಆಸ್ಪತ್ರೆಯ ಆವರಣದೊಳಗೆ ಆಂಬ್ಯುಲೆನ್ಸ್ ಗಳು ಹಾಗೂ ರಕ್ತದ ಕಲೆಗಳಿರುವಂತೆ ಕಾಣುವ ಸ್ಟ್ರೆಚರ್ ಗಳು ಕಂಡುಬಂದಿವೆ.
ಮೆಡಿಟರೇನಿಯನ್ ಸಮುದ್ರದ ಕರಾವಳಿಯಲ್ಲಿರುವ ಅಲ್-ಮವಾಸಿ ಪ್ರದೇಶದಲ್ಲಿ ಡೇರೆಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತ ಫೆಲೆಸ್ತೀನಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪ್ರದೇಶವನ್ನು ಈ ಹಿಂದೆ 'ಮಾನವೀಯ ವಲಯ' ಎಂದು ಘೋಷಿಸಲಾಗಿತ್ತು. ಆದರೂ, ಇಸ್ರೇಲ್ ಪದೇ ಪದೇ ಇಲ್ಲಿ ದಾಳಿ ನಡೆಸುತ್ತಿದೆ.
ಕಳೆದ 48 ಗಂಟೆಗಳಲ್ಲಿ ಇಸ್ರೇಲಿನ ದಾಳಿಗಳಿಂದ 16 ಮಂದಿ ಮೃತಪಟ್ಟಿದ್ದು, 68 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
2025ರ ಅಕ್ಟೋಬರ್ 11ರಂದು ಗಾಝಾದಲ್ಲಿ ಕದನ ವಿರಾಮ ಜಾರಿಗೆ ಬಂದ ಬಳಿಕ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಕನಿಷ್ಠ 1,643 ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. 5,964 ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಿಂದ ಕನಿಷ್ಠ 850 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
2023ರ ಅಕ್ಟೋಬರ್ ನಲ್ಲಿ ಇಸ್ರೇಲ್ ಗಾಝಾದ ಮೇಲೆ ನರಮೇಧದ ಯುದ್ಧ ಆರಂಭಿಸಿದಾಗಿನಿಂದ ಈವರೆಗೆ ಕನಿಷ್ಠ 74,695 ಮಂದಿ ಮೃತಪಟ್ಟಿದ್ದು, 1,76,093 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.






