ಅಪಹರಣ ಯತ್ನಕ್ಕೂ ಮುನ್ನವೇ Flydubai ಸಿಬ್ಬಂದಿಯ ವಿವರ ಇಸ್ರೇಲ್ ಬಳಿ ಇತ್ತು: ಇಸ್ರೇಲ್ ಮಾಧ್ಯಮ ವರದಿ

Photo: PTI
ದುಬೈ: ಟೆಲ್ ಅವೀವ್ ಗೆ ಹೊರಡುವ ಮುನ್ನವೇ ಫ್ಲೈದುಬೈ ವಿಮಾನದ ಪ್ರಯಾಣಿಕರು ಹಾಗೂ ಸಿಬ್ಬಂದಿಯ ವಿವರಗಳನ್ನು ಇಸ್ರೇಲ್ ಅಧಿಕಾರಿಗಳು ಪಡೆದಿದ್ದರು. ಆದರೂ, ವಿಮಾನ ಅಪಹರಣಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿರುವ ಸಹ ಪೈಲಟ್ ನಿಂದ ಸಂಭವನೀಯ ಭದ್ರತಾ ಬೆದರಿಕೆಯನ್ನು ಪತ್ತೆಹಚ್ಚಲು ಭದ್ರತಾ ತಪಾಸಣೆಗಳು ವಿಫಲವಾಗಿವೆಯೇ ಎಂಬ ಪ್ರಶ್ನೆ ಎದುರಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಫ್ಲೈಟ್ FZ1073ರ ಪ್ರಯಾಣಿಕರು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಅಧಿಕಾರಿಗಳು ಸ್ವೀಕರಿಸಿದ್ದರು ಎಂದು ಇಸ್ರೇಲ್ ತೆರಿಗೆ ಪ್ರಾಧಿಕಾರ ತಿಳಿಸಿದೆ. ಆದರೆ, ಬುಧವಾರದ ಹಾರಾಟಕ್ಕೂ ಮುನ್ನ ಈ ಮಾಹಿತಿಯನ್ನು ಪರಿಶೀಲಿಸಲಾಗಿತ್ತೇ ಎಂಬುದನ್ನು ಸಾರಿಗೆ ಸಚಿವಾಲಯ ತಿಳಿಸಿಲ್ಲ ಎಂದು ಹಾರೆಟ್ಜ್ ಶನಿವಾರ ವರದಿ ಮಾಡಿದೆ.
ಕಾಕ್ಪಿಟ್ ನಲ್ಲಿದ್ದ ಕ್ರ್ಯಾಶ್ ಕೊಡಲಿಯಿಂದ ಕ್ಯಾಪ್ಟನ್ ಮೇಲೆ ದಾಳಿ ನಡೆಸಿ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಒಮಾನ್ ನ ಸಹ ಪೈಲಟ್ ಹಮಾಮ್ ಅಲ್-ಹಮ್ಮಮಿ ಕುರಿತು ಹೊಸ ವಿವರಗಳು ಬಹಿರಂಗವಾದ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.
ಅಲ್-ಹಮ್ಮಮಿ ತೀವ್ರವಾದ ಮನೋಭಾವ ಹೊಂದಿದ್ದಾನೆ ಎಂಬ ಆತಂಕದ ಹಿನ್ನೆಲೆಯಲ್ಲಿ ಒಮಾನ್ ನಲ್ಲಿ ಈ ಹಿಂದೆ ವಿಮಾನ ಹಾರಾಟ ನಡೆಸುವುದನ್ನು ನಿಷೇಧಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಆತ ಏಕಾಂಗಿಯಾಗಿ ಕೃತ್ಯಕ್ಕೆ ಮುಂದಾಗಿದ್ದನೇ ಅಥವಾ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ಘಟನೆ ಇಸ್ರೇಲ್ನ ವಿಮಾನಯಾನ ಭದ್ರತಾ ಕಾರ್ಯವಿಧಾನಗಳ ಬಗ್ಗೆ ಕಳವಳ ಮೂಡಿಸಿದೆ.
2023ರಲ್ಲಿ ಅಂಗೀಕರಿಸಲಾದ ಇಸ್ರೇಲ್ ಕಾನೂನಿನ ಪ್ರಕಾರ, ಇಸ್ರೇಲ್ ಗೆ ಮತ್ತು ಅಲ್ಲಿಂದ ವಿಮಾನ ಸೇವೆ ನಡೆಸುವ ವಿಮಾನಯಾನ ಸಂಸ್ಥೆಗಳು, ತೆರಿಗೆ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಪ್ರಯಾಣಿಕರ ದತ್ತಾಂಶ ವಿಶ್ಲೇಷಣಾ ಕೇಂದ್ರಕ್ಕೆ ಪ್ರಯಾಣಿಕರು ಮತ್ತು ಸಿಬ್ಬಂದಿಯ ಮಾಹಿತಿಯನ್ನು ಒದಗಿಸಬೇಕು.
ವಿಮಾನ ಹೊರಡುವ 48 ಗಂಟೆ ಮುನ್ನ ಈ ಮಾಹಿತಿ ನೀಡಬೇಕು. ಹೆಸರು ಮತ್ತು ರಾಷ್ಟ್ರೀಯತೆ ಸೇರಿದಂತೆ ಗುರುತಿನ ವಿವರಗಳು ಅದರಲ್ಲಿ ಇರಬೇಕು. ಭಯೋತ್ಪಾದನೆ ಮತ್ತು ವಿಮಾನಯಾನ ಭದ್ರತೆಗೆ ಸಂಬಂಧಿಸಿದ ಸಂಭವನೀಯ ಬೆದರಿಕೆಗಳನ್ನು ಪತ್ತೆಹಚ್ಚುವುದು ಈ ದತ್ತಾಂಶ ವ್ಯವಸ್ಥೆಯ ಪ್ರಮುಖ ಉದ್ದೇಶಗಳಲ್ಲೊಂದು. ಮೊಸಾದ್, ಶಿನ್ ಬೆಟ್ ಮತ್ತು ಇಸ್ರೇಲಿ ಪೊಲೀಸರು ಸೇರಿದಂತೆ ವಿವಿಧ ಸಂಸ್ಥೆಗಳು ಈ ದತ್ತಾಂಶವನ್ನು ಪರಿಶೀಲನೆ ನಡೆಸಬಹುದು. ವಿದೇಶಿ ವಿಮಾನ ಸಿಬ್ಬಂದಿಯನ್ನು ಪರಿಶೀಲಿಸುವುದು ಹಾಗೂ ಅನುಮಾನಾಸ್ಪದ ಅಂಶಗಳು ಕಂಡುಬಂದರೆ ಎಚ್ಚರಿಕೆ ನೀಡುವುದು ಸಾರಿಗೆ ಸಚಿವಾಲಯದ ಭದ್ರತಾ ವಿಭಾಗ ಮತ್ತು ಮೊಸಾದ್ ನ ಜವಾಬ್ದಾರಿಯಾಗಿತ್ತು ಎಂದು ಹಾರೆಟ್ಜ್ ಉಲ್ಲೇಖಿಸಿರುವ ಭದ್ರತಾ ಮೂಲಗಳು ತಿಳಿಸಿವೆ.
ಆದರೆ, ಸಾರಿಗೆ ಸಚಿವಾಲಯಕ್ಕೆ ಔಪಚಾರಿಕವಾಗಿ ಈ ಜವಾಬ್ದಾರಿ ಇದ್ದರೂ, ಅದಕ್ಕೆ ಸ್ವಂತ ಗುಪ್ತಚರ ಸಾಮರ್ಥ್ಯವಿಲ್ಲ. ಹೀಗಾಗಿ ಮೊಸಾದ್ ಅಥವಾ ಶಿನ್ ಬೆಟ್ನಂತಹ ಸಂಸ್ಥೆಗಳನ್ನು ಅವಲಂಬಿಸಿದೆ ಎಂದು ಎರಡು ಭದ್ರತಾ ಮೂಲಗಳು ಪತ್ರಿಕೆಗೆ ತಿಳಿಸಿವೆ.
ಶಿನ್ ಬೆಟ್ ಪ್ರಕಾರ, ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿನ ಇಸ್ರೇಲ್ ವಿಮಾನಯಾನ ಸಂಸ್ಥೆಗಳು ಮತ್ತು ಭದ್ರತಾ ನಿರ್ದೇಶನಗಳು ಮಾತ್ರ ತನ್ನ ಜವಾಬ್ದಾರಿಯ ವ್ಯಾಪ್ತಿಗೆ ಬರುತ್ತವೆ. ವಿದೇಶಿ ವಿಮಾನಯಾನ ಸಂಸ್ಥೆಗಳು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಅದು ಹಾರೆಟ್ಜ್ ಗೆ ತಿಳಿಸಿದೆ.
ಘಟನೆಯ ತನಿಖೆಯ ನೇತೃತ್ವ ವಹಿಸಿರುವ UAE, ಇದನ್ನು ‘ಭಯೋತ್ಪಾದಕ ದಾಳಿ’ ಎಂದು ಹೇಳಿದೆ. ದಾಳಿಯ ಹಿಂದಿನ ಉದ್ದೇಶವೇನು ಹಾಗೂ ಅಲ್-ಹಮ್ಮಮಿ ಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಸೌದಿ ಅರೇಬಿಯದ ಗೃಹ ಸಚಿವಾಲಯದ ಪ್ರಕಾರ, ವೈದ್ಯಕೀಯ ಚಿಕಿತ್ಸೆ ಪಡೆದು ಪ್ರಯಾಣಿಸಲು ಅನುಮತಿ ದೊರೆತ ಬಳಿಕ ಕ್ಯಾಪ್ಟನ್ ಮತ್ತು ಅಲ್-ಹಮ್ಮಮಿಯನ್ನು ಗುರುವಾರ ಸೌದಿ ಅರೇಬಿಯದಿಂದ ಅಬುಧಾಬಿಗೆ ಸ್ಥಳಾಂತರಿಸಲಾಯಿತು.






