ಗಾಝಾ ಯುದ್ಧದಲ್ಲಿ ಅಮೆರಿಕದ ಶಸ್ತ್ರಾಸ್ತ್ರಗಳ ಬಳಸುವಾಗ ಇಸ್ರೇಲ್ ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿರಬಹುದು: ಯುಎಸ್ ವರದಿ

PC : NDTV
ವಾಷಿಂಗ್ಟನ್: ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸಿ ಗಾಝಾ ವಿರುದ್ಧದ ಯುದ್ಧದಲ್ಲಿ ಅಮೆರಿಕಾ ಪೂರೈಸಿದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿರಬಹುದು ಎಂದು ಅಮೆರಿಕ ಹೇಳಿದೆ. ಇಸ್ರೇಲ್ನ ಬಾಧ್ಯತೆಗಳಿಗೆ ಸರಿಹೊಂದದ ರೀತಿಯಲ್ಲಿ ಆ ಶಸ್ತ್ರಾಸ್ತ್ರಗಳನ್ನು ಬಳಸಿರಬಹುದು ಎಂದು ಅಂದಾಜಿಸಲಾಗಿದೆ ಆದರೆ ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲದೇ ಇರುವುದರಿಂದ ಶಸ್ತ್ರಾಸ್ತ್ರಗಳ ಪೂರೈಕೆ ಮುಂದುವರಿಯಲಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.
ಇಸ್ರೇಲ್ ಸಹಿತ ಸಂಘರ್ಷದಲ್ಲಿ ತೊಡಗಿರುವ ಆರು ಇತರ ರಾಷ್ಟ್ರಗಳು ಅಮೆರಿಕ ಪೂರೈಸಿದ ಶಸ್ತ್ರಾಸ್ತ್ರಗಳನ್ನು ಕಳೆದ ವರ್ಷದ ಪ್ರಾರಂಭದಿಂದ ಹೇಗೆ ಬಳಸಿದೆ ಎಂದು ಪರಿಶೀಲಿಸಲು ಶ್ವೇತಭವನ ಆದೇಶಿಸಿತ್ತು.
ವರದಿಯು ಗಾಝಾದಲ್ಲಿ ಇಸ್ರೇಲ್ ಕಾರ್ಯಾಚರಣೆಗಳನ್ನು ಸ್ಪಷ್ಟವಾಗಿ ಟೀಕಿಸಿದ್ದರೂ ಇಸ್ರೇಲ್ ಸೇನೆಯು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಖಡಾಖಂಡಿತವಾಗಿ ಹೇಳಿಲ್ಲ.
ಗಾಝಾದಲ್ಲಿ ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಅಭೂತಪೂರ್ವ ಮಿಲಿಟರಿ ಸವಾಲನ್ನು ಎದುರಿಸಿತ್ತು ಎಂದು ವರದಿ ಹೇಳಿದೆ. ಅದೇ ಸಮಯ ಅಮೆರಿಕಾದ ಶಸ್ತ್ರಾಸ್ತ್ರಗಳನ್ನು ವಿಶ್ವಾಸಾರ್ಹ ರೀತಿಯಲ್ಲಿ ಬಳಸುವ ಕುರಿತು ತನಗೆ ಇಸ್ರೇಲ್ನಿಂದ ಭರವಸೆ ದೊರಕಿದೆ ಎಂದು ಅಮೆರಿಕಾದ ವರದಿ ಹೇಳಿದೆ.
ನಾಗರಿಕ ಸೌಕರ್ಯಗಳನ್ನು ಹಮಾಸ್ ಮಿಲಿಟರಿ ಉದ್ದೇಶಗಳಿಗೆ ಹಾಗೂ ನಾಗರಿಕರನ್ನು ಗುರಾಣಿಗಳಾಗಿ ಬಳಸುತ್ತಿದೆ ಎಂಬುದು ತಿಳಿದಿದೆ ಹಾಗೂ ತನ್ನ ನಿರ್ದಿಷ್ಟ ಗುರಿಯನ್ನು ಇಂತಹ ಸಕ್ರಿಯ ಯುದ್ಧವಲಯದಲ್ಲಿ ಒಂದು ದೇಶಕ್ಕೆ ನಿರ್ಧರಿಸುವುದು ಕಷ್ಟಕರವಾಗುತ್ತದೆ ಎಂದು ವರದಿ ಹೇಳಿದೆ.







