ಇಸ್ರೇಲ್ ಗಾಝಾದಲ್ಲಿ ಯುದ್ಧ ಗೆಲ್ಲಬಹುದು, ಆದರೆ ಪ್ರಭಾವ ಕಳೆದುಕೊಳ್ಳುತ್ತಿದೆ : ಟ್ರಂಪ್

ಡೊನಾಲ್ಡ್ ಟ್ರಂಪ್ | PC : NDTV
ವಾಷಿಂಗ್ಟನ್, ಸೆ.2: ಗಾಝಾದಲ್ಲಿನ ಯುದ್ಧದಲ್ಲಿ ಇಸ್ರೇಲ್ ಗೆಲುವು ಸಾಧಿಸಿದರೂ ಸಾರ್ವಜನಿಕ ಸಂಪರ್ಕ ಜಗತ್ತಿನಲ್ಲಿ ಇಸ್ರೇಲ್ ನ `ಪ್ರಭಾವಕ್ಕೆ' ಘಾಸಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಾಗಿ `ದಿ ಡೈಲಿ ಕಾಲರ್' ಸುದ್ದಿಂಸ್ಥೆ ವರದಿ ಮಾಡಿದೆ.
20 ವರ್ಷ ಹಿಂದಕ್ಕೆ ಹೋದರೆ, ನಾನು ನೋಡಿದಂತೆ ಅಮೆರಿಕದ ಸಂಸತ್ತು, ಜಾಗತಿಕ ವೇದಿಕೆಗಳಲ್ಲಿ ಇಸ್ರೇಲ್ ಅತ್ಯಂತ ಬಲಿಷ್ಟವಾದ `ಲಾಬಿ' ಶಕ್ತಿಯನ್ನು ಹೊಂದಿತ್ತು. ನೀವು ರಾಜಕಾರಣಿಯಾಗಲು ಬಯಸಿದ್ದರೆ ಇಸ್ರೇಲ್ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಾಧ್ಯವಾಗದ ಕಾಲವಿತ್ತು. ಆದರೆ ಆ ಕಾಲ ಈಗ ಮುಗಿದಿದೆ ಮತ್ತು ಅವರು(ಇಸ್ರೇಲ್) ಜಾಗತಿಕವಾಗಿ ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತಿದ್ದಾರೆ' ಎಂದು ಟ್ರಂಪ್ ಹೇಳಿದ್ದಾರೆ.
ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಉಲ್ಲೇಖಿಸಿದ ಟ್ರಂಪ್ `ಇದು ನಿಜಕ್ಕೂ ಭಯಾನಕ ದಿನ' ಎಂದರು. ಈ ಯುದ್ಧವನ್ನು ಇಸ್ರೇಲ್ ಹೇಗಾದರೂ ಮುಗಿಸಬೇಕಿದೆ. ಯಾಕೆಂದರೆ ಇದು ಅವರಿಗೆ ಘಾಸಿ ಉಂಟುಮಾಡುತ್ತಿದೆ. ಅವರು ಯುದ್ಧವನ್ನು ಗೆಲ್ಲಬಹುದು, ಆದರೆ ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದ ಟ್ರಂಪ್, ಇಸ್ರೇಲ್ಗೆ ತಾನು ನೀಡಿದಷ್ಟು ಬೆಂಬಲವನ್ನು ಯಾರೂ ನೀಡಿಲ್ಲ. ಇದಕ್ಕೆ ಇತ್ತೀಚೆಗೆ ನಡೆದ ಇರಾನ್ ಮೇಲಿನ ದಾಳಿಯನ್ನು ಉದಾಹರಿಸಬಹುದು. ನಾವು ಈ ಹಿಂದೆ ಯಾರೂ ಕಂಡು ಕೇಳರಿಯದ ರೀತಿಯಲ್ಲಿ ಇರಾನನ್ನು ನಿರ್ನಾಮ ಮಾಡಿದೆವು ಎಂದು ಪ್ರತಿಪಾದಿಸಿದರು.







