ಸಾಮಾಜಿಕ ಕಾರ್ಯಕರ್ತರಿರುವ ನೌಕೆ ಗಾಝಾ ತಲುಪುವುದನ್ನು ತಡೆಯಲು ಇಸ್ರೇಲ್ ಮಿಲಿಟರಿಗೆ ಸೂಚನೆ

ಹಡಗಿನಲ್ಲಿ ಗಾಝಾಕ್ಕೆ ಹೊರಟ ಪರಿಸರವಾದಿ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್ | Photo: instagram.com/gretathunberg
ಟೆಲ್ಅವೀವ್: ಗ್ರೆಟಾ ಥನ್ಬರ್ಗ್ ಹಾಗೂ ಇತರ 11 ಸಾಮಾಜಿಕ ಕಾರ್ಯಕರ್ತರಿರುವ ನೌಕೆ ಗಾಝಾವನ್ನು ತಲುಪುವುದನ್ನು ತಡೆಯುವುದಾಗಿ ಇಸ್ರೇಲ್ನ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್ ರವಿವಾರ ಪ್ರತಿಜ್ಞೆ ಮಾಡಿದ್ದಾರೆ.
"ಗಾಝಾ ಪಟ್ಟಿಗೆ ಮಾನವೀಯ ಸಹಾಯವನ್ನು ಸಾಗಿಸುವ ನೌಕೆ ಮಾಲ್ದೀನ್ ಗಾಝಾ ತಲುಪದಂತೆ ಕ್ರಮ ಕೈಗೊಳ್ಳಬೇಕೆಂದು ಇಸ್ರೇಲ್ ಭದ್ರತಾ ಪಡೆಗೆ ಸೂಚಿಸಿದ್ದೇನೆ. ಗ್ರೆಟಾ ಹಾಗೂ ಆಕೆಯ ಹಮಾಸ್ ಪ್ರಚಾರಕ ಮಿತ್ರರಿಗೆ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ನೀವು ಹಿಂದಿರುಗುವುದು ಒಳ್ಳೆಯದು, ಯಾಕೆಂದರೆ ನೀವು ಗಾಝಾವನ್ನು ತಲುಪುವುದಿಲ್ಲ" ಎಂದು ಸಚಿವರು ಹೇಳಿದ್ದಾರೆ.
ಗಾಝಾಕ್ಕೆ ದೋಣಿಗಳ ಮೂಲಕ ನೆರವನ್ನು ತರಲು ಕಾರ್ಯಕರ್ತರು ನಡೆಸುತ್ತಿರುವ ಎರಡನೇ ಪ್ರಯತ್ನ ಇದಾಗಿದೆ. ಕಳೆದ ತಿಂಗಳು ನೆರವು ಸಾಗಿಸುತ್ತಿದ್ದ ದೋಣಿಯ ಮೇಲೆ ಮಾಲ್ಟಾ ಬಳಿಯ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಡ್ರೋನ್ ದಾಳಿ ನಡೆದಿದ್ದು ದೋಣಿಗೆ ವ್ಯಾಪಕ ಹಾನಿಯಾಗಿತ್ತು. ಈ ದಾಳಿಗೆ ಕಾರ್ಯಕರ್ತರು ಇಸ್ರೇಲ್ ಅನ್ನು ದೂಷಿಸಿದ್ದರು.





