ಇರಾನ್ ನಾಯಕ ಅಯತೊಲ್ಲಾ ಅಲಿ ಖಾಮಿನೈರ ಹತ್ಯೆಗೆ ಇಸ್ರೇಲ್ ಸಂಚು; ಡೊನಾಲ್ಡ್ ಟ್ರಂಪ್ ರಿಂದ ತಡೆ : ವರದಿ

Photo: AP
ವಾಷಿಂಗ್ಟನ್: ಕಳೆದ ಎರಡು ದಿನಗಳಲ್ಲಿ ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈರನ್ನು ಕೊಲ್ಲುವ ಇಸ್ರೇಲ್ ಸಂಚನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆದಿದ್ದಾರೆ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇಸ್ರೇಲ್ ಮೂರು ದಿನಗಳ ಹಿಂದೆ ಇರಾನ್ ಮೇಲೆ ಬೃಹತ್ ದಾಳಿ ನಡೆಸಿದ ನಂತರ, ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುವ ಪ್ರಯತ್ನದಲ್ಲಿ ಅಮೆರಿಕದ ಉನ್ನತ ಅಧಿಕಾರಿಗಳು ಇಸ್ರೇಲಿ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಖಾಮಿನೈರನ್ನು ಕೊಲ್ಲಲು ತಮಗೆ ಅವಕಾಶವಿದೆ ಎಂದು ಇಸ್ರೇಲ್ ಅಮೆರಿಕಕ್ಕೆ ತಿಳಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಟ್ರಂಪ್ ಅವರನ್ನು ಸಂಚಿನಿಂದ ದೂರವಿಟ್ಟರು ಎಂದು ಅವರು ಬಹಿರಂಗಪಡಿಸಿದ್ದಾರೆ.
ಈ ಕುರಿತ ವರದಿಗಳ ಕುರಿತು ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ಎಂದಿಗೂ ಸಂಭವಿಸದ ಸಂಭಾಷಣೆಗಳ ಬಗ್ಗೆ ಹಲವಾರು ಸುಳ್ಳು ವರದಿಗಳಿವೆ. ಆ ಕುರಿತು ನಾನು ಏನನ್ನು ಹೇಳುವುದಿಲ್ಲ", ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
"ಆದರೆ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಏನು ಒಳ್ಳೆಯದು ಎಂದು ಅಮೆರಿಕಕ್ಕೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ" ಎಂದು ನೆತನ್ಯಾಹು ಹೇಳಿದ್ದಾರೆ ಎಂದು ತಿಳಿದು ಬಂದಿದೆ.







