ರಫಾದಲ್ಲಿರುವ 200 ಹಮಾಸ್ ಸದಸ್ಯರಿಗೆ ಸುರಕ್ಷಿತ ಮಾರ್ಗ ನೀಡಲಾಗದು : ಇಸ್ರೇಲ್

Photo: AFP
ಟೆಲ್ ಅವೀವ್, ನ.4: ಗಾಝಾದಲ್ಲಿ ಇಸ್ರೇಲ್ ನಿಯಂತ್ರಣದಲ್ಲಿರುವ ರಫಾ ಪ್ರದೇಶದಲ್ಲಿರುವ ಸುಮಾರು 200 ಹಮಾಸ್ ಸದಸ್ಯರಿಗೆ ಯಾವುದೇ ಸುರಕ್ಷಿತ ಮಾರ್ಗವನ್ನು ನೀಡಲಾಗುವುದಿಲ್ಲ ಎಂದು ಇಸ್ರೇಲ್ ಪ್ರಧಾನಿಯವರ ಕಚೇರಿ ಹೇಳಿದೆ.
ರಫಾದಲ್ಲಿ ಹಮಾಸ್ ಸದಸ್ಯರು ಶಸ್ತ್ರಾಸ್ತ್ರ ಒಪ್ಪಿಸಲು ಸಮ್ಮತಿಸಿದರೆ ಅವರಿಗೆ ಸುರಕ್ಷಿತವಾಗಿ ಹೊರತೆರಳುವ ಮಾರ್ಗವನ್ನು ಇಸ್ರೇಲ್ ಅನುಮೋದಿಸಬಹುದು. ನಿರ್ದಿಷ್ಟ ಕಾರಿಡಾರ್ ಮೂಲಕ ರೆಡ್ಕ್ರಾಸ್ ವಾಹನಗಳಲ್ಲಿ ಹೋರಾಟಗಾರರನ್ನು ಸ್ಥಳಾಂತರಿಸುವ ಸಾಧ್ಯತೆಯನ್ನು ಸಂಧಾನ ಮಾತುಕತೆಯ ಮಧ್ಯವರ್ತಿಗಳು ಚರ್ಚಿಸಿದ್ದಾರೆ ಎಂದು ಅಲ್ಜಝೀರಾ ವರದಿ ಮಾಡಿತ್ತು. ಈ ರೀತಿಯ ಕ್ರಮವನ್ನು ಪರಿಶೀಲಿಸಲಾಗುತ್ತಿದೆ ಎಂಬ ವರದಿಯಲ್ಲಿ ಹುರುಳಿಲ್ಲ. ಹಮಾಸ್ ನಿಶಸ್ತ್ರೀಕರಣ ಮತ್ತು ಗಾಝಾ ಪಟ್ಟಿಯನ್ನು ಶಸ್ತ್ರಾಸ್ತ್ರ ರಹಿತ ವಲಯವನ್ನಾಗಿಸುವ ದೃಢ ನಿಲುವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದುವರಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಈ ವರದಿಯ ಬಗ್ಗೆ ಸರಕಾರವನ್ನು ಕೆಲವು ಸಚಿವರೇ ತರಾಟೆಗೆತ್ತಿಕೊಂಡಿದ್ದಾರೆ. `ಪ್ರಧಾನಿಯವರೇ, ಇದು ಸಂಪೂರ್ಣ ಹುಚ್ಚುತನ, ಇದನ್ನು ನಿಲ್ಲಿಸಿ' ಎಂದು ವಿತ್ತ ಸಚಿವ ಬೆಝಲೆಲ್ ಸ್ಮೊಟ್ರಿಚ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. `ಇದು ಅವರನ್ನು ನಾಶಗೊಳಿಸುವ ಅಥವಾ ಬಂಧಿಸುವ ಅವಕಾಶವಾಗಿದ್ದು ವ್ಯರ್ಥಗೊಳಿಸಬಾರದು' ಎಂದು ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ಗ್ವಿರ್ ಆಗ್ರಹಿಸಿದ್ದಾರೆ.





