West Bank | ಧಾರ್ಮಿಕ ಸ್ಥಳದ ನಿಯಂತ್ರಣವನ್ನು ವಶಕ್ಕೆ ಪಡೆದ ಇಸ್ರೇಲ್

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Photo: PTI)
ಟೆಲ್ಅವೀವ್, ಜೂ.16: ಆಕ್ರಮಿತ ಪಶ್ಚಿಮದಂಡೆಯಲ್ಲಿರುವ ಯಹೂದಿ ಮತ್ತು ಮುಸ್ಲಿಂ ಧಾರ್ಮಿಕ ಸ್ಥಳದ ಯೋಜನೆ ಮತ್ತು ನಿರ್ಮಾಣ ಅಧಿಕಾರವನ್ನು ಇಸ್ರೇಲ್ ಸರಕಾರವು ಫೆಲೆಸ್ತೀನಿಯನ್ ಅಥಾರಿಟಿ(ಪಿಎ)ಯಿಂದ ತನ್ನ ವಶಕ್ಕೆ ತೆಗೆದುಕೊಂಡಿದೆ. ಇದರೊಂದಿಗೆ 1990ರ ದಶಕದಿಂದ ಜಾರಿಯಲ್ಲಿದ್ದ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಇಸ್ರೇಲ್ ಹಣಕಾಸು ಸಚಿವ ಬೆಜಾಲೆಲ್ ಸ್ಮೋಟ್ರಿಚ್ ಮಂಗಳವಾರ ತಿಳಿಸಿದ್ದಾರೆ.
1997ರ ಹೆಬ್ರಾನ್ ಒಪ್ಪಂದದ ಪ್ರಕಾರ, ಯಹೂದಿಗಳ `ಟಾಂಬ್ ಆಫ್ ದಿ ಪೇಟ್ರಿಯಾಕ್ರ್ಸ್' ಮತ್ತು ಅದಕ್ಕೆ ಹೊಂದಿಕೊಂಡಿರುವ ಮುಸ್ಲಿಮರ `ಇಬ್ರಾಹಿಮಿ ಮಸೀದಿ' ಸೇರಿದಂತೆ ಇಡೀ ಹೆಬ್ರಾನ್ ನಗರದ ಯೋಜನೆ ಮತ್ತು ನಿರ್ಮಾಣ ಕಾರ್ಯಗಳ ನಿಯಂತ್ರಣ ಫೆಲೆಸ್ತೀನೀಯರ ಕೈಯಲ್ಲಿತ್ತು.
ಈ ಧಾರ್ಮಿಕ ಸ್ಥಳ ಮತ್ತು ಅದರ ಹತ್ತಿರದ ಯಹೂದಿ ವಸಾಹತು ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಗಳನ್ನು ಇಸ್ರೇಲಿ ಅಧಿಕಾರಿಗಳಿಗೆ ವರ್ಗಾಯಿಸಲು ಸೋಮವಾರ ತಡರಾತ್ರಿ ಸಹಿ ಹಾಕಿರುವುದಾಗಿ ಸ್ಮೋಟ್ರಿಚ್ ಹೇಳಿದ್ದಾರೆ. ಇಸ್ರೇಲ್ನ ಈ ಕ್ರಮವು `ಹೆಬ್ರಾನ್ನ ರಾಜಕೀಯ ಮತ್ತು ಕಾನೂನು ಸ್ಥಿತಿಯ ಮೇಲಿನ ಅತಿಕ್ರಮಣ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ' ಎಂದು ಫೆಲೆಸ್ತೀನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಕಚೇರಿ ಖಂಡಿಸಿದೆ. 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಪಶ್ಚಿಮದಂಡೆಯನ್ನು ಇಸ್ರೇಲ್ ವಶಪಡಿಸಿಕೊಂಡಿದೆ. ಆದರೆ ಈ ಪ್ರದೇಶದಲ್ಲಿ ಇಸ್ರೇಲ್ನ ಆಡಳಿತದ ಹಕ್ಕನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡಲಾಗಿಲ್ಲ.






