ಇಸ್ರೇಲ್ ನ ಸೈನ್ಯದಲ್ಲಿ 16 ವರ್ಷಗಳಲ್ಲೇ ಗರಿಷ್ಠ ಆತ್ಮಹತ್ಯೆ ಪ್ರಕರಣ: ಇಸ್ರೇಲಿನ ಪತ್ರಿಕೆ ಹಾರೆಟ್ಜ್ ವರದಿ
ಈ ವರ್ಷ 23 ಸೈನಿಕರು, ಅಧಿಕಾರಿಗಳ ಆತ್ಮಹತ್ಯೆ; ಸೇವೆಯಿಂದ ಹೊರಬಂದ 17 ಸೈನಿಕರೂ ಮೃತ್ಯು

ಸಾಂದರ್ಭಿಕ ಚಿತ್ರ (Photo: AFP)
ಹೊಸದಿಲ್ಲಿ: ಇಸ್ರೇಲ್ ನ ಸೈನ್ಯದಲ್ಲಿ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ಸೈನಿಕರು ಮತ್ತು ಅಧಿಕಾರಿಗಳ ಸಂಖ್ಯೆ 23ಕ್ಕೆ ಏರಿದೆ. ಕಳೆದ 16 ವರ್ಷಗಳಲ್ಲಿ ಒಂದೇ ವರ್ಷದಲ್ಲಿ ದಾಖಲಾದ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಇವು ಎಂದು ಇಸ್ರೇಲಿ ಪತ್ರಿಕೆ ಹಾರೆಟ್ಜ್ ಅನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದ ಸಂದರ್ಭದಲ್ಲಿ, ನಿಯಮಿತ ಹಾಗೂ ಮೀಸಲು ಪಡೆಗಳಲ್ಲಿ ಸೇವೆ ಸಲ್ಲಿಸಿದ್ದ 17 ಸೈನಿಕರು ಸೈನ್ಯದಿಂದ ಹೊರಬಂದ ಬಳಿಕ ಈ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಲ್ಲದೆ, 2026ರಲ್ಲಿ ಐವರು ಪೊಲೀಸ್ ಅಧಿಕಾರಿಗಳೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
2023ರ ಅಕ್ಟೋಬರ್ ನಲ್ಲಿ ಯುದ್ಧ ಆರಂಭವಾದ ಬಳಿಕ ಇಸ್ರೇಲ್ನ ಭದ್ರತಾ ಪಡೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆ. ಯುದ್ಧಕ್ಕೂ ಮುನ್ನದ ದಶಕದಲ್ಲಿ ಸೈನ್ಯದಲ್ಲಿ ವರ್ಷಕ್ಕೆ ಸರಾಸರಿ ಸುಮಾರು 12 ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿದ್ದವು. ಈ ವರ್ಷ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಕಳೆದ 16 ವರ್ಷಗಳಲ್ಲೇ ಗರಿಷ್ಠವಾಗಿದೆ.




