ಪಶ್ಚಿಮದಂಡೆಗೆ ಇಸ್ರೇಲ್ ಟ್ಯಾಂಕ್ಗಳ ರವಾನೆ; ನಿರಾಶ್ರಿತರ ಶಿಬಿರ ತೆರವುಗೊಳಿಸಿದ ಐಡಿಎಫ್

ಸಾಂದರ್ಭಿಕ ಚಿತ್ರ
ಜೆರುಸಲೇಂ: ಇಸ್ರೇಲಿ ಟ್ಯಾಂಕ್ಗಳು 20002ರ ನಂತರ ಮೊದಲ ಬಾರಿಗೆ ಆಕ್ರಮಿತ ಪಶ್ಚಿಮದಂಡೆಯನ್ನು ಸೋಮವಾರ ಪ್ರವೇಶಿಸಿದ್ದು ಇದು ಅಪಾಯಕಾರಿ ನಡೆಯಾಗಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಖಂಡಿಸಿದ್ದಾರೆ.
ಪಶ್ಚಿಮದಂಡೆಯ ಕೆಲವು ಭಾಗಗಳಲ್ಲಿ ಇಸ್ರೇಲ್ ತುಕಡಿಗಳು ದೀರ್ಘ ಕಾಲದವರೆಗೆ ಉಳಿಯುತ್ತವೆ ಮತ್ತು ಇಲ್ಲಿಂದ ಓಡಿಹೋಗಿರುವ ಫೆಲೆಸ್ತೀನೀಯರು ಮತ್ತೆ ಹಿಂದಿರುಗಲು ಸಾಧ್ಯವಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ. ಪಶ್ಚಿಮ ದಂಡೆಯ ಜೆನಿನ್ ನಗರದತ್ತ ಹಲವು ಟ್ಯಾಂಕ್ಗಳು ಸಾಗುತ್ತಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಸಶಸ್ತ್ರ ಹೋರಾಟಗಾರರ ದಾಳಿ ಹೆಚ್ಚಿರುವುದರಿಂದ ಫೆಲೆಸ್ತೀನ್ ಪ್ರದೇಶದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿ `ಸಶಸ್ತ್ರ ಹೋರಾಟಗಾರರ ಕೃತ್ಯ'ಗಳನ್ನು ಮಟ್ಟಹಾಕುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಪಶ್ಚಿಮದಂಡೆಯ ಉತ್ತರ ಭಾಗದಲ್ಲಿ ಜನವರಿ 21ರಂದು ಕಾರ್ಯಾಚರಣೆ ಆರಂಭಿಸಿದ ಬಳಿಕ ಕ್ರಮೇಣ ಸಮೀಪದ ಪ್ರದೇಶಗಳಿಗೆ ವಿಸ್ತರಿಸಿದೆ. ಸುಮಾರು 3 ದಶಲಕ್ಷ ಫೆಲೆಸ್ತೀನೀಯರು ವಾಸಿಸುತ್ತಿರುವ ಪಶ್ಚಿಮದಂಡೆಯ ಮೇಲೆ ಇಸ್ರೇಲ್ನ ನಿಯಂತ್ರಣವನ್ನು ಸದೃಢಗೊಳಿಸುವ ಪ್ರಯತ್ನ ಇದಾಗಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಪಶ್ಚಿಮದಂಡೆಯಲ್ಲಿರುವ ಎಲ್ಲಾ ನಿರಾಶ್ರಿತರ ಶಿಬಿರಗಳಲ್ಲಿ ಸಶಸ್ತ್ರ ಹೋರಾಟಗಾರರ ಚಟುವಟಿಕೆಗಳನ್ನು ತಡೆಯಲು ಕಾರ್ಯಾಚರಣೆ ತೀವ್ರಗೊಳಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಿಲಿಟರಿಗೆ ಆದೇಶಿಸಿದ್ದಾರೆ. ನಿವಾಸಿಗಳು ಮರಳಲು ನಾವು ಅನುಮತಿಸುವುದಿಲ್ಲ, ಸಶಸ್ತ್ರ ಹೋರಾಟಗಾರರು ಮರಳಲು ಮತ್ತು ಬೆಳೆಯಲು ಅನುಮತಿಸುವುದಿಲ್ಲ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಐಡಿಎಫ್(ಇಸ್ರೇಲ್ ಭದ್ರತಾ ಪಡೆ), ಶಿನ್ ಬೆಟ್(ಭದ್ರತಾ ಏಜೆನ್ಸಿ) ಮತ್ತು ಗಡಿ ಪೊಲೀಸ್ ಪಡೆಗಳು ಪಶ್ಚಿಮದಂಡೆಯ ಉತ್ತರ ಪ್ರಾಂತದಲ್ಲಿ ಸಶಸ್ತ್ರ ಹೋರಾಟಗಾರರ ನಿಗ್ರಹ ಕಾರ್ಯಾಚರಣೆಯನ್ನು ಮುಂದುವರಿಸಲಿವೆ. ಕಾರ್ಯಾಚರಣೆಯ ಭಾಗವಾಗಿ ಜೆನಿನ್ನಲ್ಲಿ ಟ್ಯಾಂಕ್ ವಿಭಾಗ ಕಾರ್ಯಾಚರಣೆ ನಡೆಸುತ್ತದೆ ಎಂದು ಇಸ್ರೇಲ್ನ ಮಿಲಿಟರಿ ಹೇಳಿದೆ.
ಜತೆಗೆ, ಪಶ್ಚಿಮದಂಡೆಯ ಉತ್ತರ ಪ್ರಾಂತದಲ್ಲಿನ ಮೂರು ನಗರಗಳಲ್ಲಿನ ನಿರಾಶ್ರಿತರ ಶಿಬಿರದಿಂದ ಇದುವರೆಗೆ 40,000 ಫೆಲೆಸ್ತೀನೀಯರನ್ನು ತೆರವುಗೊಳಿಸಲಾಗಿದ್ದು ಈ ಶಿಬಿರಗಳಲ್ಲಿ ದೀರ್ಘಾವಧಿಯ ಉಪಸ್ಥಿತಿಗಾಗಿ ಸಿದ್ಧವಾಗಿರುವಂತೆ ಸಶಸ್ತ್ರ ಪಡೆಗಳಿಗೆ ಸರಕಾರ ಸೂಚಿಸಿರುವುದಾಗಿ ವರದಿಯಾಗಿದೆ.
ಇಸ್ರೇಲ್ನ ನಡೆಯು ಪಶ್ಚಿಮದಂಡೆಯಲ್ಲಿನ ಪರಿಸ್ಥಿತಿಯ ಅಪಾಯಕಾರಿ ಉಲ್ಬಣವಾಗಿದ್ದು ಇಸ್ರೇಲ್ನ ಕಾನೂನುಬಾಹಿರ ಆಕ್ರಮಣದ ವಿರುದ್ಧ ಅಂತರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕೆಂದು ಫೆಲೆಸ್ತೀನ್ನ ವಿದೇಶಾಂಗ ಇಲಾಖೆ ಆಗ್ರಹಿಸಿದೆ.
1990ರಲ್ಲಿ ಸಹಿ ಹಾಕಲಾದ ಮಧ್ಯಂತರ ಶಾಂತಿ ಒಪ್ಪಂದದ ಪ್ರಕಾರ, ಪಶ್ಚಿಮದಂಡೆಯ ದೊಡ್ಡ ಭಾಗಗಳ ಮೇಲಿನ ನಿಯಂತ್ರಣವನ್ನು ಇಸ್ರೇಲ್ ನಿರ್ವಹಿಸುತ್ತದೆ. ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ) ಇತರ ಪ್ರದೇಶಗಳನ್ನು ನಿರ್ವಹಿಸುತ್ತದೆ. 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ಪಶ್ಚಿಮದಂಡೆ, ಗಾಝಾ ಮತ್ತು ಪೂರ್ವ ಜೆರುಸಲೇಂ ಅನ್ನು ವಶಪಡಿಸಿಕೊಂಡಿದೆ. ಈ ಮೂರೂ ಪ್ರದೇಶಗಳು ತಮ್ಮ ಭವಿಷ್ಯದ ಸ್ವಂತ ರಾಷ್ಟ್ರದ ಅವಿಭಾಜ್ಯ ಅಂಗ ಎಂದು ಫೆಲೆಸ್ತೀನಿಯನ್ನರು ಪ್ರತಿಪಾದಿಸುತ್ತಿದ್ದಾರೆ.







