ಗಾಝಾದ ಶಿಬಿರಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಸಾಂದರ್ಭಿಕ ಚಿತ್ರ | Photo: PTI
ಗಾಝಾ: ನಾಗರಿಕರ ಸಾವುನೋವಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಅಂತರಾಷ್ಟ್ರೀಯ ಸಮುದಾಯದ ಕಳವಳದ ನಡುವೆಯೇ ಶನಿವಾರ ಇಸ್ರೇಲ್ ವಾಯುಪಡೆ ಮಧ್ಯ ಗಾಝಾದಲ್ಲಿನ ಎರಡು ಶಿಬಿರಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದ್ದು ವ್ಯಾಪಕ ಹಾನಿಯಾಗಿದೆ ಎಂದು ವರದಿಯಾಗಿದೆ.
ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೆ ನುಸಿರಾತ್ ಮತ್ತು ಬುರೇಜ್ನ ನಗರ ನಿರಾಶ್ರಿತರ ಶಿಬಿರದ ಮೇಲೆ ಭೀಕರ ದಾಳಿ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನುಸಿರಾತ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಅಲ್-ಖುಡ್ಸ್ ಟಿವಿ ಚಾನೆಲ್ನ ಪತ್ರಕರ್ತ ಜಬೆರ್ ಅಬು ಹದ್ರೋಸ್ ಮತ್ತವರ ಕುಟುಂಬದ 6 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಈ ಮಧ್ಯೆ ಇಸ್ರೇಲ್ನ ಪದಾತಿ ದಳ ಗಾಝಾದ ಖಾನ್ಯೂನಿಸ್ ನಗರದಲ್ಲಿ ಮುನ್ನಡೆ ಸಾಧಿಸಿದ್ದು ಸಾವಿರಾರು ಫೆಲೆಸ್ತೀನೀಯರು ಈಗಾಗಲೇ ನಿರಾಶ್ರಿತರಿಂದ ಕಿಕ್ಕಿರಿದಿರುವ ರಫಾಹ್ ನಗರದತ್ತ ಪಲಾಯನ ಮಾಡುತ್ತಿದ್ದಾರೆ.
ಶುಕ್ರವಾರ ರಾತ್ರಿಯಿಂದ ಗಾಝಾ ಪಟ್ಟಿಯ ಖಾನ್ಯೂನಿಸ್ ನಗರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ 24 ಗಂಟೆಯ ಅವಧಿಯಲ್ಲಿ ಸುಮಾರು 200 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.





