ಪೂರ್ವ ಲೆಬನಾನ್ ನಲ್ಲಿ ಹಿಝ್ಬುಲ್ಲಾ ನೆಲೆಗಳ ಮೇಲೆ ದಾಳಿ: ಇಸ್ರೇಲ್ ಸೇನೆ

ಜೆರುಸಲೇಮ್: ಪೂರ್ವ ಲೆಬನಾನ್ ನಲ್ಲಿರುವ ಹಿಝ್ಬುಲ್ಲಾದ ರದ್ವಾನ್ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಸೇನೆ ಮಂಗಳವಾರ ತಿಳಿಸಿದೆ. ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹಿಝ್ಬುಲ್ಲಾ ನಡುವೆ ಯುದ್ಧವಿರಾಮ ಜಾರಿಯಲ್ಲಿರುವ ಹೊರತಾಗಿಯೂ ಈ ದಾಳಿ ನಡೆಯುತ್ತಿದೆ.
‘‘ಲೆಬನಾನ್ ನ ಬೆಕಾ ಪ್ರದೇಶದಲ್ಲಿರುವ ಹಿಝ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ಹಲವಾರು ದಾಳಿಗಳನ್ನು ನಡೆಸಲಾಗಿದೆ’’ ಎಂದು ಇಸ್ರೇಲ್ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಇಸ್ರೇಲ್ ಸೈನಿಕರು ಮತ್ತು ಇಸ್ರೇಲ್ ದೇಶದ ಮೇಲೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ಭಯೋತ್ಪಾದಕರಿಗೆ ತರಬೇತಿ ನೀಡಲು ಹಿಝ್ಬುಲ್ಲಾ ಬಳಸುತ್ತಿದ್ದ ಸೇನಾ ಆವರಣಗಳನ್ನು ಧ್ವಂಸಗೊಳಿಸಲಾಗಿದೆ’’ ಎಂದು ಅದು ಹೇಳಿದೆ.
2024 ಸೆಪ್ಟಂಬರ್‌ನಲ್ಲಿ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಬೈರೂತ್ ಮತ್ತು ದಕ್ಷಿಣ ಲೆಬನಾನ್ ನಲ್ಲಿದ್ದ ರದ್ವಾನ್ ಪಡೆ ಕಮಾಂಡರ್‌ಗಳನ್ನು ‘‘ನಿವಾರಿಸಿಕೊಳ್ಳಲಾಗಿತ್ತು’’, ಆದರೆ, ಅಂದಿನಿಂದ ತನ್ನ ಚಟುವಟಿಕೆಗಳನ್ನು ಪುನರಾರಂಭಿಸಲು ಆ ಘಟಕಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅದು ಹೇಳಿದೆ.
ಇಸ್ರೇಲ್ ಮತ್ತು ಹಿಝ್ಬುಲ್ಲಾ ನಡುವಿನ ಒಂದು ವರ್ಷಕ್ಕೂ ಅಧಿಕ ಅವಧಿಯ ಸಂಘರ್ಷವನ್ನು ಕೊನೆಗೊಳಿಸಲು ಕಳೆದ ವರ್ಷದ ನವೆಂಬರ್ ನಲ್ಲಿ ಯುದ್ಧವಿರಾಮ ಜಾರಿಗೆ ಬಂದಿರುವ ಹೊರತಾಗಿಯೂ ಇಸ್ರೇಲ್ ಲೆಬನಾನ್ ಮೇಲೆ ಪದೇ ಪದೇ ಬಾಂಬ್ ದಾಳಿಗಳನ್ನು ನಡೆಸುತ್ತಿವೆ.
ಈ ಯುದ್ಧವಿರಾಮದ ಪ್ರಕಾರ, ಹಿಝ್ಬುಲ್ಲಾವು ಇಸ್ರೇಲ್ ಗಡಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಲಿಟನಿ ನದಿಯ ಉತ್ತರ ಭಾಗದಿಂದ ತನ್ನ ಹೋರಾಟಗಾರರನ್ನು ವಾಪಸ್ ಕರೆಸಿಕೊಳ್ಳಬೇಕಾಗಿತ್ತು. ಮತ್ತು ಇಸ್ರೇಲ್ ಲೆಬನಾನ್‌ನಿಂದ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಳ್ಳಬೇಕಾಗಿತ್ತು. ಆದರೆ, ಲೆಬನಾನ್ ನ ಐದು ಸ್ಥಳಗಳಲ್ಲಿ ಅದು ಸೇನೆಯನ್ನು ಉಳಿಸಿಕೊಂಡಿದೆ.







