9 ಫೆಲೆಸ್ತೀನಿಯನ್ ಬಂಧಿತರನ್ನು ಬಿಡುಗಡೆಗೊಳಿಸಿದ ಇಸ್ರೇಲ್

PC | arabnews
ಜೆರುಸಲೇಂ: ಅಕ್ಟೋಬರ್ 2023ರಿಂದ ಗಾಝಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಸಂದರ್ಭ ಬಂಧಿಸಲ್ಪಟ್ಟಿದ್ದ 9 ಫೆಲೆಸ್ತೀನೀಯರನ್ನು ಇಸ್ರೇಲ್ ಅಧಿಕಾರಿಗಳು ಬುಧವಾರ ಬಿಡುಗಡೆಗೊಳಿಸಿದ್ದಾರೆ.
ಕಳೆದ ಸುಮಾರು 18 ತಿಂಗಳಲ್ಲಿ ಆಕ್ರಮಿತ ಪಶ್ಚಿಮದಂಡೆ, ಪೂರ್ವ ಜೆರುಸಲೇಂ ಮತ್ತು ಇಸ್ರೇಲಿನೊಳಗೆ 10,700ಕ್ಕೂ ಅಧಿಕ ಫೆಲೆಸ್ತೀನೀಯರನ್ನು ಇಸ್ರೇಲ್ ಬಂಧಿಸಿದ್ದು ಗಾಝಾದಲ್ಲೇ ಎರಡು ಸಾವಿರಕ್ಕೂ ಅಧಿಕ ಫೆಲೆಸ್ತೀನೀಯರನ್ನು ಬಂಧಿಸಲಾಗಿದೆ ಎಂದು ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ, ಎಪ್ರಿಲ್ ಅಂತ್ಯದ ವೇಳೆಗೆ ಗಾಝಾ ಪಟ್ಟಿಯ ಸುಮಾರು 1,747 ಕೈದಿಗಳು ತನ್ನ ಜೈಲಿನಲ್ಲಿದ್ದರು ಎಂದು ಇಸ್ರೇಲ್ ನ ಜೈಲು ಪ್ರಾಧಿಕಾರ ಹೇಳಿದೆ. ಬಂಧನದಲ್ಲಿರುವ ಫೆಲೆಸ್ತೀನೀಯರ ವಿರುದ್ಧ ಚಿತ್ರಹಿಂಸೆ, ಆಹಾರ, ನೀರನ್ನು ನೀಡದ ಶಿಕ್ಷೆ, ವೈದ್ಯಕೀಯ ಚಿಕಿತ್ಸೆಯ ನಿರಾಕರಣೆ, ಏಕಾಂತ ಸೆರೆವಾಸ ಮತ್ತಿತರ ದೌರ್ಜನ್ಯ ಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಬಂಧನದಲ್ಲಿರುವ ಕೈದಿಗಳ ಸ್ಥಿತಿಗತಿಗಳ ಮೇಲ್ವಿಚಾರಣೆ ನಡೆಸುವ ಎರಡು ಸಂಸ್ಥೆಗಳು ಆರೋಪಿಸಿವೆ. 2023ರ ಅಕ್ಟೋಬರ್ ನಿಂದ ಇಸ್ರೇಲಿ ಜೈಲುಗಳಲ್ಲಿ ಕನಿಷ್ಠ 66 ಫೆಲೆಸ್ತೀನಿ ಕೈದಿಗಳು ಸಾವನ್ನಪ್ಪಿದ್ದು ಇವರಲ್ಲಿ 40 ಗಾಝಾ ಪಟ್ಟಿಯ ನಿವಾಸಿಗಳು ಎಂದು ಮೂಲಗಳು ಹೇಳಿವೆ.





