ಗಾಝಾ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಸಚಿವ ಸಂಪುಟ ಅನುಮೋದನೆ | ನಾಳೆಯಿಂದಲೇ ಜಾರಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Photo: PTI)
ಜೆರುಸಲೆಮ್/ಕೈರೋ : ಫೆಲೆಸ್ತೀನಿನ ಹೋರಾಟಗಾರರ ಗುಂಪು ಹಮಾಸ್ ಜೊತೆಗಿನ ಗಾಝಾ ಕದನ ವಿರಾಮ ಒಪ್ಪಂದದ ನಿಗದಿತ ಆರಂಭಕ್ಕೆ ಒಂದು ದಿನ ಮುಂಚಿತವಾಗಿ, ಒಪ್ಪಂದಕ್ಕೆ ಇಸ್ರೇಲ್ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಶನಿವಾರ ತಿಳಿಸಿದೆ.
ಶನಿವಾರ ಮುಂಜಾನೆ ಆರು ಗಂಟೆಗಳಿಗೂ ಹೆಚ್ಚು ಕಾಲ ಸಭೆ ನಡೆಸಿದ ನಂತರ, ಹಮಾಸ್ ನಿಯಂತ್ರಣದಲ್ಲಿರುವ ಫೆಲೆಸ್ತೀನ್ ಪ್ರದೇಶದಲ್ಲಿ 15 ತಿಂಗಳಿನಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ದಾರಿ ಮಾಡಿಕೊಡುವ ಒಪ್ಪಂದವನ್ನು ಸರ್ಕಾರ ಅಂಗೀಕರಿಸಿತು.
"ಒತ್ತೆಯಾಳುಗಳ ಮರಳುವಿಕೆಗೆ ಸರ್ಕಾರ ಕದನ ವಿರಾಮವನ್ನು ಅನುಮೋದಿಸಿದೆ. ಒತ್ತೆಯಾಳುಗಳ ಬಿಡುಗಡೆ ರವಿವಾರದಿಂದ ಜಾರಿಗೆ ಬರಲಿದೆ" ಎಂದು ನೆತನ್ಯಾಹು ಕಚೇರಿ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆಯಾದಾಗಿನಿಂದ, ಗಾಝಾದಲ್ಲಿಯೇ ಇಸ್ರೇಲಿ ಯುದ್ಧ ವಿಮಾನಗಳು ಭಾರೀ ದಾಳಿಗಳನ್ನು ಮುಂದುವರಿಸಿವೆ. ಶನಿವಾರ ಮುಂಜಾನೆ ಇಸ್ರೇಲಿ ವಾಯುದಾಳಿಯು ದಕ್ಷಿಣದಲ್ಲಿರುವ ಖಾನ್ ಯೂನಿಸ್ ನ ಪಶ್ಚಿಮಕ್ಕೆ ಮಾವಾಸಿ ಪ್ರದೇಶದಲ್ಲಿನ ಟೆಂಟ್ ನಲ್ಲಿ ಐದು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಗಾಝಾದ ವೈದ್ಯರು ತಿಳಿಸಿದ್ದಾರೆ.
ಬುಧವಾರ ಒಪ್ಪಂದ ಘೋಷಣೆಯಾದಾಗಿನಿಂದ ಇಸ್ರೇಲಿ ಬಾಂಬ್ ದಾಳಿಯಿಂದ ಸಾವನ್ನಪ್ಪಿದ ಫೆಲೆಸ್ತೀನೀಯರ ಸಂಖ್ಯೆ 119 ಕ್ಕೆ ಏರಿದೆ.







