ಲಂಚ ಪ್ರಕರಣ | ನೆತನ್ಯಾಹು ಖುದ್ದು ಹಾಜರಾತಿಯನ್ನು ಮುಂದೂಡಿದ ಇಸ್ರೇಲ್ ನ್ಯಾಯಾಲಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಟೆಲ್ ಅವೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲದೊಂದಿಗೆ, ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಸಾಕ್ಷ್ಯ ವಿಚಾರಣೆಯನ್ನು ವಿಳಂಬಗೊಳಿಸಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನವಿ ಮಾಡಿದ ಹಿನ್ನೆಲೆಯಲ್ಲಿ, ರವಿವಾರ ಇಸ್ರೇಲ್ ನ್ಯಾಯಾಲಯವೊಂದು ಅವರ ಸಾಕ್ಷ್ಯ ವಿಚಾರಣೆಯನ್ನು ಮುಂದೂಡಿದೆ ಎಂದು ಅವರ ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಅಂತರ್ಜಾಲದಲ್ಲಿ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಬೆಂಜಮಿನ್ ನೆಹನ್ಯಾಹು ನೇತೃತ್ವದ ಲಿಕುಡ್ ಪಕ್ಷ, “ನೀಡಿರುವ ವಿವರಣೆಗಳ ಹಿನ್ನೆಲೆಯಲ್ಲಿ, ನಾವು ಅವರ ಮನವಿಯನ್ನು ಭಾಗಶಃ ಪುರಸ್ಕರಿಸಿದ್ದೇವೆ ಹಾಗೂ ಈ ವಾರದ ಮಟ್ಟಿಗೆ ನೆತನ್ಯಾಹು ವಿಚಾರಣೆಯನ್ನು ಮುಂದೂಡಿದ್ದೇವೆ ಎಂದು ಜೆರುಸಲೇಂ ಜಿಲ್ಲಾ ನ್ಯಾಯಾಲಯ ಹೇಳಿದೆ” ಎಂದು ತಿಳಿಸಿದೆ.
ಇರಾನ್ ನೊಂದಿಗಿನ ಕದನ ವಿರಾಮ ಹಾಗೂ ಇಸ್ರೇಲ್ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಗಾಝಾದಲ್ಲಿ ಮುಂದುವರಿದಿರುವ ಯುದ್ಧಕ್ಕೆ ಸಂಬಂಧಿಸಿದಂತೆ ಭದ್ರತಾ ವಿಷಯಗಳತ್ತ ಗಮನ ಹರಿಸಲು, ಬೆಂಜಮಿನ್ ನೆತನ್ಯಾಹು ಅವರಿಗೆ ಮುಂದಿನ ಎರಡು ವಾರಗಳ ಕಾಲ ಸಾಕ್ಷ್ಯ ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ನೆತನ್ಯಾಹು ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
“ಪ್ರಧಾನಿಗಳು ತಮ್ಮ ಸಮಯ ಮತ್ತು ಶಕ್ತಿಯನ್ನೆಲ್ಲ ರಾಜಕೀಯ, ರಾಷ್ಟ್ರೀಯ ಹಾಗೂ ಭದ್ರತಾ ವಿಷಯಗಳಿಗಾಗಿ ವಿನಿಯೋಗಿಸಬೇಕಾಗಿರುವುದು ರಾಷ್ಟ್ರೀಯ ಅವಶ್ಯಕತೆಯಾಗಿದೆ” ಎಂದು ವಾದಿಸಿದ ನೆತನ್ಯಾಹು ಪರ ವಕೀಲರು, ನೆತನ್ಯಾಹು ನ್ಯಾಯಾಲಯಕ್ಕೆ ಹಾಜರಾಗಲಿರುವ ವೇಳಾಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಆದರೆ, ವಕೀಲರ ಈ ಮನವಿಯನ್ನು ನ್ಯಾಯಾಲಯ ಆರಂಭದಲ್ಲಿ ತಳ್ಳಿ ಹಾಕಿತಾದರೂ, ಪ್ರಧಾನಿಗಳು, ಸೇನಾ ಗುಪ್ತಚರ ದಳದ ಮುಖ್ಯಸ್ಥರು ಹಾಗೂ ಮೊಸಾದ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥರ ವಾದಗಳನ್ನು ಆಲಿಸಿದ ನಂತರ, ನಮ್ಮ ಆದೇಶವನ್ನು ಮಾರ್ಪಡಿಸಿರುವುದಾಗಿ ರವಿವಾರ ಪ್ರಕಟಿಸಿದೆ.
ಇದಕ್ಕೂ ಮುನ್ನ, ನೆತನ್ಯಾಹುವನ್ನು ಬಲಿಪಶುವನ್ನಾಗಿಸಲಾಗುತ್ತಿದೆ ಎಂದು ಜೂನ್ 25ರಂದು ಬಣ್ಣಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ವಿರುದ್ಧದ ವಿಚಾರಣೆಯನ್ನು ತಕ್ಷಣವೇ ರದ್ದುಗೊಳಿಸಬೇಕು, ಅವರಿಗೆ ಕ್ಷಮಾದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದರು.







