ದುಬೈ ಏರ್ ಶೋನಲ್ಲಿ ಭಾಗವಹಿಸದಂತೆ ಇಸ್ರೇಲ್ ರಕ್ಷಣಾ ಕಂಪೆನಿಗಳಿಗೆ ನಿಷೇಧ : ವರದಿ

ಸಾಂದರ್ಭಿಕ ಚಿತ್ರ | middleeastmonitor
ಯುಎಇ : ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಮುಂಬರುವ ದುಬೈ ಏರ್ ಶೋನಲ್ಲಿ ಇಸ್ರೇಲ್ ರಕ್ಷಣಾ ಕಂಪೆನಿಗಳಿಗೆ ಭಾಗವಹಿಸಲು ಅವಕಾಶ ನೀಡಿಲ್ಲ ಎಂದು Bloomberg ವರದಿ ಮಾಡಿದೆ.
ಇಸ್ರೇಲ್ ಕಂಪೆನಿಗಳಿಗೆ ಪತ್ರ ಬರೆದು ನವೆಂಬರ್ನಲ್ಲಿ ನಡೆಯುವ ದುಬೈ ಏರ್ ಶೋನಲ್ಲಿ ಭಾಗವಹಿಸಲು ಅನುಮತಿ ಇಲ್ಲ ಎಂದು ಏರ್ ಶೋ ಆಯೋಜಕರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ನಿರ್ಧಾರದ ಬಗ್ಗೆ ಇಸ್ರೇಲ್ ರಕ್ಷಣಾ ಸಚಿವಾಲಯಕ್ಕೂ ಅಧಿಕೃತವಾಗಿ ತಿಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆ ವರದಿ ಮಾಡಿದೆ.
ಆಯೋಜಕರು ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿಲ್ಲವಾದರೂ, ಪತ್ರದಲ್ಲಿ ಕಂಪೆನಿಗಳ ವೃತ್ತಿಪರ ಅರ್ಹತೆಗಳಲ್ಲಿನ ನ್ಯೂನತೆಗಳನ್ನು ಉಲ್ಲೇಖಿಸಿದೆ ಮತ್ತು ದೋಹಾ ಮೇಲೆ ಮುಷ್ಕರ ನಡೆದ ಸೆಪ್ಟೆಂಬರ್ 9ರಂದು ಈ ಪತ್ರವನ್ನು ನೀಡಲಾಗಿದೆ ಎಂದು ಅಧಿಕಾರಿಯೋರ್ವರು ಹೇಳಿರುವ ಬಗ್ಗೆ ಬ್ಲೂಮ್ಬರ್ಗ್ ವರದಿಯಲ್ಲಿ ಉಲ್ಲೇಖಿಸಿದೆ.
ಗಾಝಾದಲ್ಲಿ ಇಸ್ರೇಲ್ನಿಂದ ಮುಂದುವರಿದ ನರಮೇಧ ಮತ್ತು ಖತರ್ ಮೇಲೆ ಇತ್ತೀಚೆಗೆ ನಡೆಸಿದ ದಾಳಿಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ದಾಳಿಯಲ್ಲಿ ದೋಹಾದಲ್ಲಿನ ಹಮಾಸ್ ರಾಜಕೀಯ ಬ್ಯೂರೋವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿತ್ತು. ದಾಳಿಯಲ್ಲಿ ಖತರ್ನ ಆಂತರಿಕ ಭದ್ರತಾ ಪಡೆಯ ಅಧಿಕಾರಿ ಸೇರಿದಂತೆ ಆರು ಜನರು ಮೃತಪಟ್ಟಿದ್ದರು. ದಾಳಿಯನ್ನು ಖತರ್ ಬಲವಾಗಿ ಖಂಡಿಸಿತ್ತು.







