ಒತ್ತೆಯಾಳುಗಳ ಬಿಡುಗಡೆಯಾಗದಿದ್ದರೆ ಗಾಝಾ ನಗರ ನಾಶ: ಇಸ್ರೇಲ್ ಎಚ್ಚರಿಕೆ

PC | PTI
ಜೆರುಸಲೇಂ, ಆ.22: ಶಸ್ತ್ರಾಸ್ತ್ರ ಕೆಳಗಿಳಿಸಲು ಮತ್ತು ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ಒಪ್ಪದಿದ್ದರೆ ಗಾಝಾ ನಗರವನ್ನು ನಾಶಗೊಳಿಸುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಯುದ್ಧ ಕೊನೆಗೊಳಿಸಲು ಇಸ್ರೇಲ್ನ ಷರತ್ತುಗಳಿಗೆ, ಮುಖ್ಯವಾಗಿ ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮತ್ತು ನಿಶ್ಯಸ್ತ್ರೀಕರಣಕ್ಕೆ ಹಮಾಸ್ ಒಪ್ಪುವತನಕ ಗಾಝಾದಲ್ಲಿ ಹಮಾಸ್ ಗುಂಪಿನ ಸದಸ್ಯರ ತಲೆಯ ಮೇಲೆ ನರಕದ ಬಾಗಿಲು ತೆರೆಯಲಿದೆ. ಅವರು ಒಪ್ಪದಿದ್ದರೆ ಹಮಾಸ್ ನ ರಾಜಧಾನಿ ಗಾಝಾವು ರಫಾ ಮತ್ತು ಬೀಟ್ ಹನೌನ್ (ಇಸ್ರೇಲ್ ಕಾರ್ಯಾಚರಣೆಯಲ್ಲಿ ಹಾನಿಗೊಳಗಾದ ಗಾಝಾದ ಎರಡು ನಗರಗಳು) ಆಗಲಿದೆ' ಎಂದು ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಉದ್ದೇಶದ ಮಾತುಕತೆಯನ್ನು ತಕ್ಷಣ ಮುಂದುವರಿಸುವಂತೆ ಇಸ್ರೇಲ್ ನಿಯೋಗಕ್ಕೆ ಸೂಚಿಸಲಾಗಿದೆ.
ಮಾತುಕತೆಯ ಜೊತೆಗೇ ಗಾಝಾ ನಗರವನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಯೂ ನಡೆಯಲಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಹಮಾಸ್ ಅನ್ನು ಸೋಲಿಸುವ ವಿಷಯಗಳು ಒಟ್ಟಿಗೇ ಸಾಗಲಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ.





