ಗಾಝಾದ ವೈದ್ಯರೊಬ್ಬರ ಮನೆವರೆಗೂ ಹಿಂಬಾಲಿಸಿ ಅವರ ಕುಟುಂಬವನ್ನೇ ಬಲಿ ತೆಗೆದುಕೊಂಡ ಇಸ್ರೇಲ್ ಡ್ರೋನ್!
ಇಸ್ರೇಲ್ ಮಾಡಿದ ಭೀಕರ ಹತ್ಯೆಯ ಘಟನೆಯನ್ನು ತೆರೆದಿಟ್ಟ ಬ್ರಿಟಿಷ್ ವೈದ್ಯೆ

ಸಾಂದರ್ಭಿಕ ಚಿತ್ರ (File Photo: PTI)
ಲಂಡನ್: ಗಾಝಾದಿಂದ ಇತ್ತೀಚೆಗಷ್ಟೆ ತವರಿಗೆ ಮರಳಿರುವ ಬ್ರಿಟಿಷ್ ವೈದ್ಯೆಯೊಬ್ಬರು, ನನ್ನ ಸಹೋದ್ಯೋಗಿಯ ಮನೆಗೆ ಅಪ್ಪಳಿಸಿದ ಇಸ್ರೇಲ್ ಡ್ರೋನ್ ಗೆ ಅವರ ಕುಟುಂಬ ಬಲಿಯಾಗಿದೆ ಎಂದು Sky News ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಕುರಿತು Sky News ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡಾ. ನದಾ ಅಲ್-ಹದಿತಿ, ಗಾಝಾದಲ್ಲಿನ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಇಸ್ರೇಲ್ ನ ಡ್ರೋನ್ ದಾಳಿಯಲ್ಲಿ ಮೃತಪಟ್ಟ ತನ್ನ ಸಹೋದ್ಯೋಗಿಯನ್ನು ತಾಳ್ಮೆಯ, ಲವಲವಿಕೆಯ ಹಾಗೂ ಕಠಿಣ ಪರಿಶ್ರಮದ ವ್ಯಕ್ತಿ ಎಂದು ಡಾ. ಅಲ್-ಹದಿತಿ ಶ್ಲಾಘಿಸಿದ್ದಾರೆ.
ಅಲ್-ಹದಿತಿ ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ಪ್ರಕಾರ, ಇಸ್ರೇಲಿನ ಫಸ್ಟ್-ಪರ್ಸನ್-ವ್ಯೂ (FPV) ಕ್ವಾಡ್ಕಾಪ್ಟರ್ ಡ್ರೋನ್, ಸಹೋದ್ಯೋಗಿಯು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿತು.
"ಅವರೊಬ್ಬರಿದ್ದಾಗಲೇ ಕೊಲ್ಲಬಹುದಿತ್ತು. ಆದರೆ ಡ್ರೋನ್ ಆಪರೇಟರ್ ಅದರ ಬದಲಿಗೆ ವೈದ್ಯಕೀಯ ಸಿಬ್ಬಂದಿಯು ತನ್ನ ಡೇರೆಯೊಳಗೆ ಪ್ರವೇಶಿಸುವ ತನಕ ಕಾಯುತ್ತಿದ್ದ. ತನ್ನ ಮೂವರು ಪುಟ್ಟ ಮಕ್ಕಳು ಅವರನ್ನು ಸ್ವಾಗತಿಸಿ ಒಳಗೆ ಕರೆ ತರುತ್ತಿದ್ದಂತೆಯೇ ಒಂದೇ ಬಾರಿಗೆ ದಾಳಿ ಮಾಡಿ ಅವರೆಲ್ಲರನ್ನೂ ಹತ್ಯೆ ಮಾಡಿತು", ಎಂದು ಅಮಾನವೀಯ ಘಟನೆಯನ್ನು ತೆರೆದಿಟ್ಟರು.
“ತನ್ನ ಶಿಬಿರದ ಬಳಿ ಸ್ಫೋಟಗೊಂಡ ಇಸ್ರೇಲ್ ಬಾಂಬ್ ಗೆ 21 ವರ್ಷದ ಆರು ತಿಂಗಳ ಗರ್ಭಿಣಿ ತನ್ನ ಮಗುವನ್ನು ಕಳೆದುಕೊಂಡಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆಗೆ, ಗರ್ಭಿಣಿಯರಿಗೆ ಬೇಕಾದ ವಿಟಮಿನ್ ಸಹಿತ ಆಹಾರಗಳು ಸಿಗಲಿಲ್ಲ. ಇದರ ಪರಿಣಾಮವಾಗಿ ಆಕೆಯ ಹೊಟ್ಟೆಯಲ್ಲಿದ್ದ ಮಗು ಒಂದು ದಿನ ಚಲನೆಯನ್ನೇ ನಿಲ್ಲಿಸಿ ಬಿಟ್ಟಿತು,” ಎಂದು ಡಾ. ಅಲ್-ಹದಿತಿ ಗದ್ಗದಿತರಾದರು.
“ಆಕೆಯ ಪತಿ ಹತರಾಗಿದ್ದಾರೆ. ಆಕೆ ತನ್ನ ಕಣ್ಣು ಕಳೆದುಕೊಂಡಿದ್ದಾಳೆ. ಆಕೆಯ ಮೂಳೆಮುರಿತವಾಗಿದೆ ಹಾಗೂ ಆಕೆಯ ಎರಡೂ ಕಾಲುಗಳು ಬಾಂಬ್ ಸ್ಫೋಟದಿಂದ ಸಂಪೂರ್ಣ ಹಾನಿಗೀಡಾಗಿವೆ” ಎಂದು ಅವರು ತಿಳಿಸಿದ್ದಾರೆ.
“ಒಂದು ಶಾಲಾ ಕೊಠಡಿಯ ವಿಸ್ತೀರ್ಣದಷ್ಟು ಮಕ್ಕಳು ಪ್ರತಿ ದಿನ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯ ಗಾಝಾ ಪ್ರಜೆಗಳೊಂದಿಗೆ ಗಾಝಾ ಆರೋಗ್ಯ ಸೇವಾ ಕಾರ್ಯಕರ್ತರೂ ಹಸಿವಿನಿಂದ ಬಳಲುತ್ತಿದ್ದಾರೆ” ಎಂದು ಅವರು ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಗಾಝಾದಲ್ಲಿ ಮೂರು ವಾರಗಳ ಕಾಲ ಕಾರ್ಯನಿರ್ವಹಿಸಿರುವ ಡಾ. ನದಾ ಅಲ್-ಹದಿತಿ, “ನಮ್ಮ ರೋಗಿಗಳ ಸೊರಗುವಿಕೆ ಹಾಗೂ ಗಾಝಾದಲ್ಲಿನ ಹಸಿವಿಗೆ ಅಜಗಜಾಂತರ ವ್ಯತ್ಯಾಸವಿದೆ” ಎಂದು ಅಲ್ಲಿ ಆಹಾರಕ್ಕಾಗಿನ ಕ್ಷಾಮವನ್ನು ತೆರೆದಿಟ್ಟಿದ್ದಾರೆ.
“ಬಾಂಬ್ ದಾಳಿಯ ತೀವ್ರತೆ ಹಾಗೂ ನಿರಂತರತೆ ಕೂಡಾ ಕೆಟ್ಟದಾಗಿದೆ. ಹಸಿರು ವಲಯದಲ್ಲಿರುವ ಶಿಬಿರಗಳನ್ನು ಸ್ಫೋಟಿಸುವ ಮೂಲಕ ಸಾಮೂಹಿಕ ಹತ್ಯೆ ನಡೆಸಲಾಗುತ್ತಿದೆ. ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಗಾಝಾದಲ್ಲಿನ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಮಾತನಾಡಿದ ಡಾ. ಅಲ್-ಹದಿತಿ ಅವರು ತಮ್ಮ ಮನಸ್ಸಿಗೆ ನಾಟಿದ ಅನುಭವಿ ಹಂಚಿಕೊಂಡರು.
"ನಾನು ಪ್ರತಿದಿನವೂ ಬಡತನದಿಂದ ಮತ್ತು ಅಹಾರದ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ನೋಡುತ್ತೇನೆ. ಇಂಗ್ಲೆಂಡ್ ನ ಎಕ್ಸೆಟರ್ ಎಂಬ 1.3 ಲಕ್ಷ ಜನಸಂಖ್ಯೆ ಇರುವ ಒಂದು ಪಟ್ಟಣದಷ್ಟು ಜಾಗದಲ್ಲಿ, 20 ಲಕ್ಷ ಜನರು ಗಾಝಾದಲ್ಲಿ ಜೀವಿಸುತ್ತಿದ್ದಾರೆ. ಅವರಿಗೆ ಅಲ್ಲಿ ಶುದ್ಧ ನೀರಿಲ್ಲ, ಶೌಚಾಲಯಗಳಿಲ್ಲ, ಆಹಾರವಿಲ್ಲ, ಔಷಧೋಪಚಾರವೂ ಇಲ್ಲ. ಇದು ಯುದ್ಧಭೂಮಿ ಅಲ್ಲ, ಇದು ಜೀವಂತ ನರಕ", ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾವು ಜೊತೆಗೆ ಕೆಲಸ ಮಾಡುತ್ತಿರುವ ಫೆಲೆಸ್ತೀನ್ ನ ವೈದ್ಯಕೀಯ ಸಿಬ್ಬಂದಿಯ ಬದ್ಧತೆ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು. "ಈ ಮಟ್ಟದ ಘನತೆ, ಧೈರ್ಯ, ಮತ್ತು ಮಾನವೀಯ ಬದ್ಧತೆಯನ್ನು ನಾನು ನನ್ನ ಜೀವನದಲ್ಲಿ ಇಲ್ಲಿಯವರೆಗೆ ಕಂಡಿದ್ದು ನನಗೆ ನೆನಪಿಲ್ಲ. ಅವರು ಸಮಸ್ಯೆಗಳ ನಡುವೆಯೂ ನಿಲ್ಲದೆ ಹಠ ಹಿಡಿದು ಕೆಲಸ ಮಾಡುತ್ತಾರೆ. ಅದು ನನಗೆ ಪ್ರೇರಣೆಯಾಗಿದೆ", ಎಂದು ಅವರು ಶ್ಲಾಘಿಸಿದ್ದಾರೆ.
ಕೃಪೆ: arabnews.com







