ಗಾಝಾದ ಶಿಫಾ ಆಸ್ಪತ್ರೆ ಪ್ರವೇಶಿಸಿದ ಇಸ್ರೇಲಿ ಪಡೆ ; ಗೇಟ್ ಗಳಲ್ಲಿ ಗುಂಡಿನ ಚಕಮಕಿ

Photo: NDTV
ಗಾಝಾ: ಇಸ್ರೇಲಿ ಪಡೆಗಳು ಬುಧವಾರ ಗಾಝಾದ ಅತೀ ದೊಡ್ಡ ಆಸ್ಪತ್ರೆ ಅಲ್-ಶಿಫಾ ಪ್ರವೇಶಿಸಿದ್ದು ಆಸ್ಪತ್ರೆಯ ಪ್ರತೀ ಕೊಠಡಿ ಹಾಗೂ ನೆಲಮಾಳಿಗೆಯನ್ನು ಶೋಧಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿ ಹೇಳಿದ್ದು ಆಸ್ಪತ್ರೆಯ ಗೇಟ್ನಲ್ಲಿ ತೀವ್ರ ಗುಂಡಿನ ಚಕಮಕಿ ನಡೆದಿದೆ ಎಂದು ಇಸ್ರೇಲ್ ಹೇಳಿದೆ.
ಗಾಝಾ ನಗರದ ಅಲ್-ಶಿಫಾ ಆಸ್ಪತ್ರೆ ಇಸ್ರೇಲ್ ಪದಾತಿ ದಳದ ಕಾರ್ಯಾಚರಣೆಯ ಮುಖ್ಯ ಗುರಿಯಾಗಿತ್ತು. ಆಸ್ಪತ್ರೆಯ ನೆಲಮಾಳಿಗೆಯಡಿ ಹಮಾಸ್ ಕಾರ್ಯಾಚರಣೆ ಕೇಂದ್ರವಿದೆ ಎಂದು ಇಸ್ರೇಲ್ ಹೇಳುತ್ತಿದೆ. ಆದರೆ ಇದನ್ನು ಹಮಾಸ್ ನಿರಾಕರಿಸಿದೆ.
ಇದೀಗ ಆಸ್ಪತ್ರೆಯೊಳಗೆ ಸಿಕ್ಕಿಬಿದ್ದಿರುವ ನೂರಾರು ರೋಗಿಗಳು ಹಾಗೂ ಸಾವಿರಾರು ಸ್ಥಳಾಂತರಿತ ನಾಗರಿಕರ ಭವಿಷ್ಯದ ಮೇಲೆ ಪ್ರಪಂಚದ ಗಮನ ಕೇಂದ್ರೀಕೃತಗೊಂಡಿದೆ. ಕೆಲ ದಿನಗಳಿಂದ ಆಸ್ಪತ್ರೆಯನ್ನು ಇಸ್ರೇಲ್ ಸೇನೆ ಸುತ್ತುವರಿದ ಬಳಿಕ ಇತ್ತೀಚಿನ ದಿನಗಳಲ್ಲಿ ಮೂರು ನವಜಾತ ಶಿಶುಗಳ ಸಹಿತ ಹಲವರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಅಧಿಕಾರಿಗಳು ಹೇಳಿದ್ದಾರೆ.
`ಆಸ್ಪತ್ರೆ ಪ್ರವೇಶಕ್ಕೂ ಮುನ್ನ ನಮ್ಮ ಪಡೆಗೆ ಸ್ಫೋಟಕ ಸಾಧನಗಳು ಹಾಗೂ ಹೋರಾಟಗಾರರ ತಂಡ ಎದುರಾಗಿದ್ದು ಗೇಟಿನ ಹೊರಗಡೆ ನಡೆದ ಘರ್ಷಣೆಯಲ್ಲಿ ನಮ್ಮ ಪದಾತಿ ಪಡೆ ಹಲವರನ್ನು ಹತ್ಯೆಗೈದಿವೆ. ಇಸ್ರೇಲ್ ನಿಂದದ ನಮ್ಮ ಪಡೆ ಟ್ಯಾಂಕ್ ಗಳಲ್ಲಿ ತಂದಿರುವ ಇನ್ಕ್ಯುಬೇಟರ್ಗಳು, ಮಕ್ಕಳ ಆಹಾರ ಮತ್ತು ವೈದ್ಯಕೀಯ ಸರಬರಾಜು ಶಿಫಾ ಆಸ್ಪತ್ರೆಗೆ ಯಶಸ್ವಿಯಾಗಿ ತಲುಪಿದೆ ಎಂದು ನಾವು ದೃಢಪಡಿಸಿಕೊಂಡಿದ್ದೇವೆ. ನಮ್ಮ ವೈದ್ಯಕೀಯ ತಂಡಗಳು ಹಾಗೂ ಅರೆಬಿಕ್ ಮಾತನಾಡುವ ಸೈನಿಕರು ಈ ಅಗತ್ಯ ವಸ್ತುಗಳನ್ನು ತಲುಪಿಸಲು ಕಾರ್ಯನಿರ್ವಹಿಸುತ್ತಿದ್ದಾರೆ' ಎಂದು ಇಸ್ರೇಲ್ ಸೇನೆಯ ಹೇಳಿಕೆ ತಿಳಿಸಿದೆ.
ಮಂಗಳವಾರ ರಾತ್ರಿಯಿಂದ ಆಸ್ಪತ್ರೆಯ ಹೊರಗಡೆ ಸಂಘರ್ಷ ಭುಗಿಲೆದ್ದ ಬಳಿಕ ಆಸ್ಪತ್ರೆಯೊಳಗೆ ವೈದ್ಯಕೀಯ ಸಿಬಂದಿ ಅವಿತು ಕುಳಿತಿದ್ದಾರೆ. ಬಳಿಕ ಟ್ಯಾಂಕ್ ಗಳು ಆಸ್ಪತ್ರೆಯನ್ನು ಸುತ್ತುವರಿದವು, ಒಂದು ದೊಡ್ಡ ಟ್ಯಾಂಕ್ ಪೂರ್ವದ ಮುಖ್ಯ ದ್ವಾರದ ಮೂಲಕ ಆಸ್ಪತ್ರೆಯನ್ನು ಪ್ರವೇಶಿಸಿತು. ಇಸ್ರೇಲ್ ನ ಟ್ಯಾಂಕ್ ಗಳು ಈಗ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದ ಎದುರು ನಿಂತಿದೆ. ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನೂ ಬಳಸಲಾಗುತ್ತಿದೆ. ಅವರು ಆಸ್ಪತ್ರೆಯನ್ನು ನೇರವಾಗಿ ಗುರಿಯಾಗಿಸಿಕೊಂಡಿದ್ದಾರೆ' ಎಂದು ಆಸ್ಪತ್ರೆಯ ವೈದ್ಯ ಡಾ. ಅಹ್ಮದ್ ಎಲ್ ಮೊಹಲ್ಲಾಲಾತಿಯವರನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಇಸ್ರೇಲಿ ಸೇನೆ ಆಸ್ಪತ್ರೆಯ ವಾರ್ಡಿನ ನೆಲ ಅಂತಸ್ತು ಹಾಗೂ ಕೊಠಡಿಗಳಲ್ಲಿ ಶೋಧ ನಡೆಸುತ್ತಿದೆ. ಯೋಧರು ಆಸ್ಪತ್ರೆಯ ಆವರಣದಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ. ಕೆಲವೊಮ್ಮೆ ಗುಂಡಿನ ಸದ್ದು ಕೇಳಿಬರುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಗುಪ್ತಚರ ಮಾಹಿತಿ ಮತ್ತು ಕಾರ್ಯಾಚರಣೆಯ ಅಗತ್ಯವನ್ನು ಆಧರಿಸಿ ಇಸ್ರೇಲ್ ನ ಭದ್ರತಾ ಪಡೆ ಶಿಫಾ ಆಸ್ಪತ್ರೆಯ ನಿರ್ದಿಷ್ಟ ಪ್ರದೇಶದಲ್ಲಿ ಹಮಾಸ್ ವಿರುದ್ಧ ನಿಖರ ಮತ್ತು ಉದ್ದೇಶಿತ ದಾಳಿ ನಡೆಸಿದೆ ಎಂದು ಇಸ್ರೇಲ್ ನ ರಕ್ಷಣಾ ಪಡೆ(ಐಡಿಎಫ್) ಹೇಳಿದೆ.
ವಿಶ್ವಸಂಸ್ಥೆ, ರೆಡ್ಕ್ರಾಸ್ ಕಳವಳ
ಗಾಝಾ: ಇಸ್ರೇಲಿ ಪಡೆಗಳು ಗಾಝಾದ ಅತೀ ದೊಡ್ಡ ಆಸ್ಪತ್ರೆ ಅಲ್-ಶಿಫಾವನ್ನು ಸುತ್ತುವರಿದು ದಾಳಿ ನಡೆಸಿದ ಬೆನ್ನಲ್ಲೇ ಆಸ್ಪತ್ರೆಯಲ್ಲಿರುವ ಸಾವಿರಾರು ರೋಗಿಗಳು ಹಾಗೂ ನಾಗರಿಕರ ಸುರಕ್ಷತೆಯ ಬಗ್ಗೆ ವಿಶ್ವಸಂಸ್ಥೆ ಹಾಗೂ ಮಾನವೀಯ ಏಜೆನ್ಸಿಗಳು ಕಳವಳ ವ್ಯಕ್ತಪಡಿಸಿವೆ.
ಅಲ್-ಶಿಫಾ ಆಸ್ಪತ್ರೆಯ ಕೆಳಗೆ ಹಮಾಸ್ ಸುರಂಗಮಾರ್ಗ ರಚಿಸಿ ತನ್ನ ಕಮಾಂಡ್ ಕೇಂದ್ರ ಸ್ಥಾಪಿಸಿದೆ ಎಂದು ಇಸ್ರೇಲ್ ಸೇನೆ ಹೇಳುತ್ತಿದೆ.
`ಗಾಝಾದ ಅಲ್-ಶಿಫಾ ಆಸ್ಪತ್ರೆಯ ಮೇಲಿನ ಮಿಲಿಟರಿ ದಾಳಿಯ ವರದಿಗಳಿಂದ ದಿಗ್ಭ್ರಮೆಗೊಂಡಿದ್ದೇನೆ. ನವಜಾತ ಶಿಶುಗಳು, ರೋಗಿಗಳು, ವೈದ್ಯಕೀಯ ಸಿಬಂದಿ ಹಾಗೂ ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಯಲ್ಲಿ ಆಶ್ರಯ ಪಡೆದಿರುವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು' ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳು ಹಾಗೂ ತುರ್ತು ಪರಿಹಾರ ಸಂಯೋಜಕ ಮಾರ್ಟಿನ್ ಗ್ರಿಫಿತ್ಸ್ ಆಗ್ರಹಿಸಿದ್ದಾರೆ.
ಆಸ್ಪತ್ರೆಗಳು ಯುದ್ಧರಂಗಗಳಲ್ಲ. ಅಲ್-ಶಿಫಾ ಆಸ್ಪತ್ರೆಗೆ ಮಿಲಿಟರಿ ಆಕ್ರಮಣ ತೀವ್ರ ಕಳವಳಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಆಸ್ಪತ್ರೆಯ ಆರೋಗ್ಯ ಸಿಬಂದಿಗಳೊಂದಿಗಿನ ಸಂಪರ್ಕ ಕಳೆದುಕೊಂಡಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ ಟ್ವೀಟ್ ಮಾಡಿದ್ದಾರೆ. ಆಸ್ಪತ್ರೆಯಲ್ಲಿನ ವೈದ್ಯಕೀಯ ಸಿಬಂದಿ, ರೋಗಿಗಳು ಹಾಗೂ ಆಶ್ರಯ ಪಡೆದಿರುವವರ ಸುರಕ್ಷತೆ ಬಗ್ಗೆ ಆತಂಕವಿದೆ. ಅವರ ಮೇಲೆ ಯಾವುದೇ ಪರಿಣಾಮ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಂತರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ(ಐಸಿಆರ್ಸಿ) ಒತ್ತಾಯಿಸಿದೆ.
ರೋಗಿಗಳು, ಸಿಬಂದಿ ಮತ್ತು ಸ್ಥಳಾಂತರಗೊಂಡ ನಾಗರಿಕರ ಸಹಿತ ಆಸ್ಪತ್ರೆಯೊಳಗೆ ಕನಿಷ್ಟ 2,300 ಜನರಿದ್ದಾರೆಂದು ಅಂದಾಜಿಸಲಾಗಿದೆ. ಆಸ್ಪತ್ರೆ ಸುತ್ತಮುತ್ತ ನಡೆಯುತ್ತಿರುವ ಉಗ್ರ ಹೋರಾಟದಿಂದಾಗಿ ಆಸ್ಪತ್ರೆ ತೊರೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.







