ಗಾಝಾ ನಗರದಲ್ಲಿ ಇಸ್ರೇಲ್ ನಿಂದ ಮತ್ತೊಂದು ಬಹುಮಹಡಿ ಕಟ್ಟಡ ಧ್ವಂಸ

PC - IDF
ಗಾಝಾ, ಸೆ.7: ಗಾಝಾ ನಗರದಲ್ಲಿ ಇಸ್ರೇಲ್ ಆಕ್ರಮಣವನ್ನು ತೀವ್ರಗೊಳಿಸಿದ್ದು ರವಿವಾರ ಮತ್ತೊಂದು ಬಹುಮಹಡಿ ಕಟ್ಟಡವನ್ನು ಧ್ವಂಸಗೊಳಿಸಿರುವುದಾಗಿ ವರದಿಯಾಗಿದೆ.
ಗಾಝಾ ನಗರದ ಸುಸ್ಸಿ ಕಟ್ಟಡ ಕುಸಿಯುತ್ತಿರುವ ವೀಡಿಯೊವನ್ನು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು `ನಾವು ಮುಂದುವರಿಸಿದ್ದೇವೆ' ಎಂದು ಶೀರ್ಷಿಕೆ ನೀಡಿದ್ದಾರೆ.
ಗಾಝಾದಲ್ಲಿ ಕಾರ್ಯಾಚರಣೆ ವಿಸ್ತರಿಸಿರುವ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಕಟ್ಟಡವನ್ನು ಹಮಾಸ್ ನ ಕಾರ್ಯಾಚರಣೆಗಾಗಿ ಬಳಸಲಾಗುತ್ತಿತ್ತು ಎಂದು ಪ್ರತಿಪಾದಿಸಿದ್ದು ಇದನ್ನು ಹಮಾಸ್ ನಿರಾಕರಿಸಿದೆ.
ದಾಳಿಗೂ ಮುನ್ನ ಹೆಲಿಕಾಪ್ಟರ್ ಮೂಲಕ ಕರಪತ್ರಗಳನ್ನು ಉದುರಿಸಿದ ಐಡಿಎಫ್ ` ಸ್ಥಳೀಯರು ಖಾನ್ ಯೂನಿಸ್ ಬಳಿಯ ಅಲ್-ಮವಾಸಿಯಲ್ಲಿ ಸ್ಥಾಪಿಸಲಾಗಿರುವ ಮಾನವೀಯ ವಲಯಕ್ಕೆ ಸ್ಥಳಾಂತರಗೊಳ್ಳುವಂತೆ' ಆಗ್ರಹಿಸುವ ಸೂಚನೆಯನ್ನು ಪುನರಾವರ್ತಿಸಿದೆ. ಈ ಮಧ್ಯೆ, ಅಲ್-ಮವಾಸಿಯಲ್ಲಿ ಕುಡಿಯುವ ನೀರಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಐದು ಮಂದಿ ಮಕ್ಕಳು ಇಸ್ರೇಲ್ ನ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಐಡಿಎಫ್ ಹೇಳಿದೆ.





