ಇಸ್ರೇಲ್ - ಫೆಲೆಸ್ತೀನ್ ನ ಸಾಕ್ಷ್ಯಚಿತ್ರ ‘ನೋ ಅದರ್ ಲ್ಯಾಂಡ್’ ಗೆ ಆಸ್ಕರ್ ಪ್ರಶಸ್ತಿ
ಫೆಲೆಸ್ತೀನಿಯನ್ನರ ಜನಾಂಗೀಯ ನಿರ್ಮೂಲನೆಯನ್ನು ನಿಲ್ಲಿಸಿ: ಸಾಕ್ಷ್ಯಚಿತ್ರ ನಿರ್ದೇಶಕರ ಆಗ್ರಹ

Photo : Rueters
ಲಾಸ್ ಏಂಜಲೀಸ್: ಇಸ್ರೇಲ್ ಸೇನೆಯಿಂದ ತಮ್ಮ ಮನೆಗಳನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿರುವ ಫೆಲೆಸ್ತೀನಿಯರ ಕುರಿತಾದ 'ನೋ ಅದರ್ ಲ್ಯಾಂಡ್' ಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ.
ಫೆಲೆಸ್ತೀನಿಯನ್ನರ ಜನಾಂಗೀಯ ನಿರ್ಮೂಲನೆಯನ್ನು ನಿಲ್ಲಿಸಿ ಎಂದು ‘ನೋ ಅದರ್ ಲ್ಯಾಂಡ್’’ ಸಾಕ್ಷ್ಯಚಿತ್ರದ ನಿರ್ದೇಶಕರ ಪೈಕಿ ಒಬ್ಬರಾದ ಬೇಸಲ್ ಅದ್ರಾ ಆಗ್ರಹಿಸಿದ್ದು, “ಫೆಲೆಸ್ತೀನಿಯನ್ನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಜಗತ್ತು ಗಂಭೀರ ಕ್ರಮ ಕೈಗೊಳ್ಳಬೇಕು ಹಾಗೂ ಫೆಲೆಸ್ತೀನಿಯನ್ನರ ಜನಾಂಗೀಯ ನಿರ್ಮೂಲನೆಯನ್ನು ತಡೆಯಬೇಕು” ಎಂದು ಆಗ್ರಹಿಸಿದ್ದಾರೆ. ಬೇಸಲ್ ಆದ್ರಾ ಫೆಲೆಸ್ತೀನ್ ನ ಹೋರಾಟಗಾರ ಹಾಗೂ ಪತ್ರಕರ್ತರಾಗಿದ್ದಾರೆ.
ತಮ್ಮ ನಿರ್ದೇಶನದ ‘ನೋ ಅದರ್ ಲ್ಯಾಂಡ್’ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ನಿರ್ದೇಶಕರಾದ ಯುವಾಲ್ ಅಬ್ರಹಾಂ, ಬೇಸಲ್ ಅದ್ರಾ, ಹಮ್ದಾನ್ ಬಲ್ಲಾಲ್ ಹಾಗೂ ರ್ಯಾಚೆಲ್ ಝಾರ್, ಫೆಲೆಸ್ತೀನ್ ಬಿಕ್ಕಟ್ಟಿಗೆ ರಾಜಕೀಯ ಪರಿಹಾರದ ಅಗತ್ಯತೆಯನ್ನು ಪ್ರತಿಪಾದಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಬೇಸಲ್ ಅದ್ರಾ, “ನಾನು ಎರಡು ತಿಂಗಳ ಹಿಂದೆ ತಂದೆಯಾಗಿದ್ದು, ನನ್ನ ಪುತ್ರಿಯೂ ನಾನೀಗ ಜೀವಿಸುತ್ತಿರುವ ಜೀವನವನ್ನು ಜೀವಿಸಬಾರದು ಎಂಬುದು ನನ್ನ ಬಯಕೆಯಾಗಿದೆ. ದಶಕಗಳಿಂದ ನಾವು ಎದುರಿಸುತ್ತಿರುವ ಕಠೋರ ವಾಸ್ತವ ಹಾಗೂ ಅದನ್ನು ನಾವೀಗಲೂ ಅದನ್ನು ಪ್ರತಿರೋಧಿಸುತ್ತಾ ಬರುತ್ತಿರುವುದನ್ನು ‘ನೋ ಅದರ್ ಲ್ಯಾಂಡ್’ ಸಾಕ್ಷ್ಯಚಿತ್ರ ಪ್ರತಿಫಲಿಸಿದೆ” ಎಂದು ಅವರು ಹೇಳಿದರು.
ಫೆಲೆಸ್ತೀನಿಯನ್ನರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿರುವ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಇಸ್ರೇಲ್ ಪತ್ರಕರ್ತ ಯುವಾಲ್ ಅಬ್ರಹಾಂ, “ಫೆಲೆಸ್ತೀನಿಯನ್ನರು ಹಾಗೂ ಇಸ್ರೇಲಿಗರಾದ ನಾವು ಈ ಚಿತ್ರವನ್ನು ಒಟ್ಟಾಗಿ ನಿರ್ಮಿಸಿದ್ದೇವೆ. ಕಾರಣ, ನಮ್ಮ ಧ್ವನಿಗಳು ಶಕ್ತಿಶಾಲಿಯಾಗಿವೆ. ಅಂತ್ಯಗೊಳ್ಳಲೇಬೇಕಾದ ಗಾಝಾ ಹಾಗೂ ಅಲ್ಲಿನ ಜನರ ವಿನಾಶವನ್ನು ನಾವಿಬ್ಬರೂ ನೋಡುತ್ತಿದ್ದೇವೆ. ಅಕ್ಟೋಬರ್ 7ರಂದು ಅತ್ಯಂತ ಅಮಾನುಷವಾಗಿ ಒತ್ತೆಯಾಳುಗಳನ್ನಾಗಿಸಿಕೊಳ್ಳಲಾಗಿರುವ ಇಸ್ರೇಲ್ ಪ್ರಜೆಗಳನ್ನು ಬಿಡುಗಡೆ ಮಾಡಲೇಬೇಕು” ಎಂದು ಕರೆ ನೀಡಿದರು.
ತಮ್ಮಿಬ್ಬರ ನಡುವಿನ ಅಸಮಾನತೆಯ ಮೇಲೂ ಬೆಳಕು ಚೆಲ್ಲಿದ ಅಬ್ರಹಾಂ, “ನಾನು ನಾಗರಿಕ ಕಾನೂನುಗಳಿರುವ ಪ್ರಭುತ್ವದಡಿ ಸ್ವತಂತ್ರವಾಗಿ ಜೀವಿಸುತ್ತಿದ್ದರೆ, ತನ್ನ ಜೀವನವನ್ನು ನಾಶಗೊಳಿಸಿದ ಹಾಗೂ ಅದನ್ನು ತನ್ನಿಂದ ತಡೆಯಲಾಗದ ಬೇಸಲ್ ಸೇನಾ ಕಾನೂನುಗಳ ಆಡಳಿತದಡಿ ಜೀವಿಸುತ್ತಿದ್ದಾನೆ” ಎಂಬುದರತ್ತ ಬೊಟ್ಟು ಮಾಡಿದರು.
“ಈ ಬಿಕ್ಕಟ್ಟಿಗೆ ಭಿನ್ನ ದಾರಿಯಿದ್ದು, ಜನಾಂಗೀಯ ಮೇಲರಿಮೆಯಿಲ್ಲದ, ಎರಡೂ ಕಡೆಯ ಜನರಿಗೆ ರಾಷ್ಟ್ರೀಯ ಹಕ್ಕುಗಳಿರುವ ರಾಜಕೀಯ ಪರಿಹಾರ ಸಾಧ್ಯವಿದೆ” ಎಂದೂ ಅವರು ಸಲಹೆ ನೀಡಿದರು.
ಅಮೆರಿಕ ವಿದೇಶಾಂಗ ನೀತಿಯನ್ನೂ ಟೀಕಿಸಿದ ಅಬ್ರಹಾಂ, “ಬೇಸಲ್ ನ ಜನರಿಗೆ ನೈಜ ಸ್ವಾತಂತ್ರ್ಯ ದೊರೆತಾಗ ಮಾತ್ರ ನಾವು ಸುರಕ್ಷಿತ ಎಂಬಂತೆ ನಾವಿಬ್ಬರೂ ಪರಸ್ಪರ ಬೆಸೆದುಕೊಂಡಿರುವುದು ನಿಮಗೇಕೆ ಕಾಣುತ್ತಿಲ್ಲ?” ಎಂದು ಕಟುವಾಗಿ ಪ್ರಶ್ನಿಸಿದರು.
ಇಸ್ರೇಲ್ ಸರಕಾರವು ಫೆಲೆಸ್ತೀನ್ ಕುಟುಂಬವೊಂದನ್ನು ಪಶ್ಚಿಮ ದಂಡೆಯಿಂದ ತೆರವುಗೊಳಿಸಿದ್ದರ ಕುರಿತು ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ.
ಈ ಸಾಕ್ಷ್ಯಚಿತ್ರವನ್ನು ಇಸ್ರೇಲ್ ಹಾಗೂ ಫೆಲೆಸ್ತೀನ್ ನ ನಾಲ್ವರು ಹೋರಾಟಗಾರರು ಒಟ್ಟಾಗಿ ನಿರ್ಮಿಸಿದ್ದು, ಸದ್ಯ ಮುಂದುವರಿದಿರುವ ಪ್ರಾಂತೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನ್ಯಾಯಕ್ಕಾಗಿ ತೋರುವ ಪ್ರತಿರೋಧದ ಕ್ರಿಯೆಯನ್ನು ಈ ಸಾಕ್ಷ್ಯಚಿತ್ರ ಮಂಡಿಸುತ್ತದೆ.
ಫೆಲೆಸ್ತೀನ್ ಹಾಗೂ ನಾರ್ವೆಯ ಸಹ ನಿರ್ಮಾಣದ ಈ ಸಾಕ್ಷ್ಯಚಿತ್ರವು 74ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿತ್ತು. ಫೆಬ್ರವರಿ 14, 2024ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಸಾಕ್ಷ್ಯಚಿತ್ರವು, ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪನೋರಮಾ ಪ್ರೇಕ್ಷಕರ ಪ್ರಶಸ್ತಿ ಹಾಗೂ ಬರ್ಲಿನ್ ಸಾಕ್ಷ್ಯಚಿತ್ರ ಪ್ರಶಸ್ತಿಗೆ ಭಾಜನವಾಗಿತ್ತು.







