ಪಶ್ಚಿಮದಂಡೆ ನಗರಗಳಲ್ಲಿ ಇಸ್ರೇಲ್ ಅಧಿಕಾರಿಗಳಿಂದ ಫೆಲೆಸ್ತೀನೀಯರ ಮನೆ ಧ್ವಂಸ

ಸಾಂದರ್ಭಿಕ ಚಿತ್ರ (PTI)
ಗಾಝಾ: ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲ್ ಅಧಿಕಾರಿಗಳು ಸೋಮವಾರ ಮನೆಗಳ ಸಹಿತ ಹಲವು ಫೆಲೆಸ್ತೀನಿಯನ್ ರಚನೆಗಳನ್ನು ಧ್ವಂಸಗೊಳಿಸಿರುವುದಾಗಿ ವರದಿಯಾಗಿದೆ.
ರಮಲ್ಲಾದ ಉತ್ತರದಲ್ಲಿರುವ ಅಲ್-ಮುಘಾಯ್ಯಿರ್ ಗ್ರಾಮದಲ್ಲಿ ಇಸ್ರೇಲ್ ಪಡೆಗಳು ಎರಡು ಮನೆಗಳನ್ನು, ಕಾಲ್ಕಿಯಾ ಪ್ರಾಂತದ ಪೂರ್ವದಲ್ಲಿರುವ ಅಲ್-ಫಂಡುಕ್ ಎಂಬಲ್ಲಿ ಒಂದು ಮನೆಯನ್ನು, ಜೋರ್ಡಾನ್ ಕಣಿವೆಯಲ್ಲಿ ಹಲವು ರಚನೆಗಳನ್ನು ನೆಲಸಮಗೊಳಿಸಿದ್ದಾರೆ.
ಖಾಲೆಟ್ ಅಲ್-ದಬಾ ಗ್ರಾಮದಲ್ಲಿ ನಿವಾಸಿಗಳನ್ನು ಬಲವಂತದಿಂದ ತೆರವುಗೊಳಿಸಿ ಮನೆಗಳು, ನೀರಿನ ಬಾವಿಗಳು, ಪ್ರಾಕೃತಿಕ ಗುಹೆಗಳು, ಕೃಷಿ ಕೇಂದ್ರಗಳು, ಸೋಲಾರ್ ಪ್ಯಾನೆಲ್ಗಳ ಸಹಿತ 25ಕ್ಕೂ ಅಧಿಕ ರಚನೆಗಳನ್ನು ಧ್ವಂಸಗೊಳಿಸಿದ್ದಾರೆ. ರಮಲ್ಲಾದಲ್ಲಿ ಒಂದು ಮನೆಯನ್ನು ಕೆಡವಲಾಗಿದ್ದು ಮತ್ತೊಂದು ಮನೆಯನ್ನು ನೆಲಸಮಗೊಳಿಸುವುದಾಗಿ ನೋಟಿಸ್ ನೀಡಲಾಗಿದೆ. ಉತ್ತರದ ಜೋರ್ಡಾನ್ ಕಣಿವೆಯಲ್ಲಿ ಹಲವು ಮನೆಗಳು, ನಬಿ ಇಲಿಯಾಸ್ ಗ್ರಾಮದಲ್ಲಿ ವಾಹನ ರಿಪೇರಿ ಮಾಡುವ ಗ್ಯಾರೇಜ್ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ.





