ಅಮೆರಿಕ ಅಧ್ಯಕ್ಷ ಟ್ರಂಪ್ ಹತ್ಯೆಗೆ ಇರಾನ್ ಸಂಚು: ಇಸ್ರೇಲ್ ಪ್ರಧಾನಿ ನೆತನ್ಯಾಹು ಆರೋಪ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (PTI)
ವಾಷಿಂಗ್ಟನ್: ಇರಾನ್ನ ಆಡಳಿತವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತನ್ನ ಪರಮಾಣು ಯೋಜನೆಗೆ ಅಪಾಯ ಎಂದು ಗುರುತಿಸಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ಬಯಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಹೇಳಿದ್ದಾರೆ.
ಇರಾನ್ ಗೆ ಟ್ರಂಪ್ ಮೊದಲ ಶತ್ರು. ಹಾಗಾಗಿ ಅವರನ್ನು ಮುಗಿಸಲು ಬಯಸಿದೆ ಎಂದು ನೆತನ್ಯಾಹು ಹೇಳಿದ್ದಾರೆ ಎಂದು ʼಫಾಕ್ಸ್ ನ್ಯೂಸ್ʼ ವರದಿ ಮಾಡಿದೆ.
ನನ್ನ ಮನೆಯ ಮಲಗುವ ಕೋಣೆಯ ಕಿಟಕಿಗೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ನಾನು ಕೂಡ ಸರ್ಕಾರದ ಗುರಿಯಾಗಿರುವುದಾಗಿ ನೆತನ್ಯಾಹು ಫಾಕ್ಸ್ ನ್ಯೂಸ್ ಗೆ ತಿಳಿಸಿದರು.
ನಮ್ಮ ದೇಶವು ಪರಮಾಣು ವಿನಾಶದ ಅಪಾಯವನ್ನು ಎದುರಿಸುತ್ತಿದೆ. ಇದಕ್ಕೆ ತಕ್ಷಣವೇ ಆಕ್ರಮಣಕಾರಿಯಾಗಿ ಪ್ರತಿಕ್ರಿಯೆ ನೀಡುವುದು ಬಿಟ್ಟು ಬೇರೆ ದಾರಿಯಿಲ್ಲ ಎಂದು ನೆತನ್ಯಾಹು ಹೇಳಿದರು.
ತನ್ನ ಆಡಳಿತದಲ್ಲಿ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೆ ಜಗತ್ತನ್ನು ಸಹ ರಕ್ಷಿಸುತ್ತಿದೆ. ಇರಾನ್ ಇಸ್ರೇಲಿ ನಗರಗಳ ಮೇಲೆ ದೊಡ್ಡ ಪ್ರಮಾಣದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯೊಂದಿಗೆ ಪ್ರತೀಕಾರ ತೀರಿಸಿಕೊಂಡಿದೆ. ಆದರೂ ಅನೇಕ ಸ್ಪೋಟಕಗಳನ್ನು ವಿಫಲಗೊಳಿಸಲಾಯಿತು ಇಂದು ಅವರು ಮಾಹಿತಿ ನೀಡಿದರು.
ಇಸ್ರೇಲ್ನ ಆಕ್ರಮಣಕಾರಿ ಕ್ರಮಗಳು ಇರಾನಿನ ಪರಮಾಣು ಕಾರ್ಯಕ್ರಮಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆ ನೀಡಿವೆ ಇಂದು ನೆತನ್ಯಾಹು ಫಾಕ್ಸ್ ನ್ಯೂಸ್ಗೆ ತಿಳಿಸಿದರು.
ಇರಾನ್ ಜಗತ್ತಿಗೆ ಒಡ್ಡುವ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಬೆದರಿಕೆಯನ್ನು ತೊಡೆದುಹಾಕಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಮ್ಮ ದೇಶ ಸಿದ್ಧವಾಗಿದೆ ಎಂದು ಅವರು ಹೇಳಿದರು.
ʼಆಪರೇಷನ್ ರೈಸಿಂಗ್ ಲಯನ್ʼ ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯನ್ನು "ಇತಿಹಾಸದ ಶ್ರೇಷ್ಠ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ" ಎಂದು ನೆತನ್ಯಾಹು ಬಣ್ಣಿಸಿದರು. ಇರಾನಿನ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಸ್ರೇಲ್ ದೇಶವನ್ನು ನಾಶಮಾಡುವ ಬೆದರಿಕೆ ಹಾಕಿರುವ ಇರಾನ್ ಆಡಳಿತದಿಂದ ಅಲ್ಲಿಯ ಜನತೆ 50 ವರ್ಷಗಳಿಂದ ದಬ್ಬಾಳಿಕೆಗೆ ಒಳಗಾಗಿದ್ದಾರೆ ಎಂದು ಹೇಳಿದರು.







