ಇಸ್ರೇಲ್ ನಲ್ಲಿ ಗರಿಗೆದರಿದ ಸರಕಾರ ರಚನೆ ಪ್ರಕ್ರಿಯೆ | ರವಿವಾರ ನಿರ್ಣಾಯಕ ಘೋಷಣೆ: ಅಧ್ಯಕ್ಷ ಐಸಾಕ್ ಹರ್ಜೋಗ್
ಐಸೆನ್ಕೋಟ್ ಗೆ 67 ಸಂಸದರ ಬೆಂಬಲ; ನೆತನ್ಯಾಹು ಪರ 46

ಐಸಾಕ್ ಹರ್ಜೋಗ್ (Photo: India Today)
ಜೆರುಸಲೆಮ್: ಇಸ್ರೇಲ್ ನಲ್ಲಿ ಚುನಾವಣೋತ್ತರ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಸರಕಾರ ರಚನೆಯ ಹೊಣೆ ಯಾರ ಹೆಗಲೇರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಮುಖ ಪ್ರತಿಸ್ಪರ್ಧಿ, ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್ಕೋಟ್ ಅವರಿಗೆ ಸಂಸತ್ತಿನ ಬಹುಪಾಲು ಸದಸ್ಯರ ಬೆಂಬಲ ವ್ಯಕ್ತವಾಗಿದೆ. ಆದರೆ, ಈ ಬೆಂಬಲ ಸರಕಾರ ರಚನೆಗೆ ಸಾಕಾಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ, ರವಿವಾರ ಸರಕಾರ ರಚನೆಗೆ ಒಬ್ಬ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡುವುದಾಗಿ ಅಧ್ಯಕ್ಷ ಐಸಾಕ್ ಹರ್ಜೋಗ್ ಘೋಷಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅಕ್ಟೋಬರ್ 27ರಂದು ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿರಲಿಲ್ಲ. ಹೀಗಾಗಿ, ನೆತನ್ಯಾಹು ಮತ್ತು ಐಸೆನ್ಕೋಟ್ ಇಬ್ಬರೂ ಸರಕಾರ ರಚಿಸಲು ಅಗತ್ಯವಾದ ಸಂಸದರ ಬೆಂಬಲ ಕ್ರೋಡೀಕರಿಸುವ ಪ್ರಯತ್ನದಲ್ಲಿದ್ದಾರೆ.
ಚುನಾವಣೆಯ ಬಳಿಕ ಸರಕಾರ ರಚನೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಅಧ್ಯಕ್ಷ ಹರ್ಜೋಗ್ ಅವರ ಮೇಲಿದೆ. ಬಹುತೇಕ ಸಾಂಕೇತಿಕ ಅಧಿಕಾರ ಹೊಂದಿರುವ ಅಧ್ಯಕ್ಷರು, ತೀವ್ರ ರಾಜಕೀಯ ವಿಭಜನೆಯಿಂದ ಕೂಡಿರುವ ದೇಶದಲ್ಲಿ ಮೈತ್ರಿ ಸರಕಾರ ರಚಿಸುವ ಅತ್ಯುತ್ತಮ ಅವಕಾಶ ಹೊಂದಿರುವ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಬೇಕಿದೆ.
ಈ ಸಂಬಂಧ ಹರ್ಜೋಗ್ ಅವರು ಬುಧವಾರ ಮತ್ತು ಗುರುವಾರ ವಿವಿಧ ರಾಜಕೀಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಸಂಸತ್ತಿನ ಒಟ್ಟು 120 ಸದಸ್ಯರ ಪೈಕಿ 67 ಮಂದಿ ಐಸೆನ್ಕೋಟ್ ಅವರನ್ನು ಬೆಂಬಲಿಸಿದರೆ, 46 ಮಂದಿ ನೆತನ್ಯಾಹು ಪರವಾಗಿ ನಿಂತಿದ್ದಾರೆ.
ಮಾತುಕತೆಗಳ ಬಳಿಕ ಟಿವಿಯಲ್ಲಿ ಮಾತನಾಡಿದ ಹರ್ಜೋಗ್, ಸಂಖ್ಯಾಬಲದ ಲೆಕ್ಕಾಚಾರ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡರೂ, ರಾಜಕೀಯ ಮೈತ್ರಿಕೂಟಗಳ ನಡುವೆ ಮಾತ್ರವಲ್ಲದೆ, ಅವುಗಳ ಒಳಗಡೆಯೂ ಪರಸ್ಪರ ವಿರೋಧಗಳಿವೆ. ಕೆಲವು ಪಕ್ಷಗಳು ಇತರ ಪಕ್ಷಗಳೊಂದಿಗೆ ಸೇರಿ ಸರಕಾರ ರಚಿಸುವುದಕ್ಕೆ ಒಪ್ಪುತ್ತಿಲ್ಲ. ಹೀಗಾಗಿ, ಯಾರಿಗೆ ಸರಕಾರ ರಚಿಸುವ ಉತ್ತಮ ಅವಕಾಶವಿದೆ ಎಂಬುದನ್ನು ನಿರ್ಧರಿಸುವುದು ಕಷ್ಟವಾಗಿದೆ ಎಂದರು.
ರವಿವಾರ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ತಿಳಿಸಿದ ಅವರು, ಶುಕ್ರವಾರ ಮತ್ತು ಶನಿವಾರ ಕೆಲವು ಪಕ್ಷಗಳ ನಾಯಕರೊಂದಿಗೆ ವೈಯಕ್ತಿಕ ಮಾತುಕತೆ ನಡೆಸುವುದಾಗಿ ಹೇಳಿದರು. ಇಸ್ರೇಲ್ ನಲ್ಲಿ ಶುಕ್ರವಾರ ಮತ್ತು ಶನಿವಾರ ವಾರಾಂತ್ಯದ ದಿನಗಳಾಗಿವೆ.
ಸರಕಾರ ರಚನೆಗೆ 42 ದಿನಗಳ ಗಡುವು
ಅಧ್ಯಕ್ಷರಿಂದ ನಾಮನಿರ್ದೇಶನಗೊಂಡ ಅಭ್ಯರ್ಥಿಗೆ ಸರಕಾರ ರಚಿಸಲು ಆರಂಭದಲ್ಲಿ 28 ದಿನಗಳ ಕಾಲಾವಕಾಶ ಸಿಗಲಿದೆ. ಈ ಅವಧಿಯಲ್ಲಿ ಸರಕಾರ ರಚಿಸಲು ಸಾಧ್ಯವಾಗದಿದ್ದರೆ, ಹೆಚ್ಚುವರಿ 14 ದಿನಗಳ ಅವಕಾಶ ನೀಡಬಹುದು. ಒಟ್ಟಾರೆ ಗರಿಷ್ಠ 42 ದಿನಗಳಲ್ಲಿ ಸರಕಾರ ರಚಿಸಬೇಕಾಗುತ್ತದೆ.
ಹೊಸ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರುವವರೆಗೆ ನೆತನ್ಯಾಹು ಅವರೇ ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಯಾವುದೇ ಅಭ್ಯರ್ಥಿಯಿಂದಲೂ ಸರಕಾರ ರಚಿಸಲು ಸಾಧ್ಯವಾಗದಿದ್ದರೆ ಮತ್ತೊಂದು ಚುನಾವಣೆ ನಡೆಯಬೇಕಾಗುತ್ತದೆ. ಅಲ್ಲಿಯವರೆಗೂ ನೆತನ್ಯಾಹು ಹಂಗಾಮಿ ಪ್ರಧಾನಿಯಾಗಿ ಅಧಿಕಾರದಲ್ಲಿರಲಿದ್ದಾರೆ.
ಲಿಕುಡ್ ಗೆ 27 ಸ್ಥಾನ; ಮೈತ್ರಿಕೂಟಕ್ಕೆ 53
ನೆತನ್ಯಾಹು ನೇತೃತ್ವದ 'ಲಿಕುಡ್' ಪಕ್ಷವು 120 ಸದಸ್ಯ ಬಲದ ಇಸ್ರೇಲ್ ಸಂಸತ್ತು 'ನೆಸೆಟ್'ನಲ್ಲಿ 27 ಸ್ಥಾನಗಳನ್ನು ಗೆದ್ದಿದೆ. ಇದು ಯಾವುದೇ ಏಕೈಕ ಪಕ್ಷ ಗಳಿಸಿದ ಅತ್ಯಧಿಕ ಸ್ಥಾನಗಳಾಗಿವೆ. ಆದರೆ, ನೆತನ್ಯಾಹು ಅವರ ನೇತೃತ್ವದ ಧಾರ್ಮಿಕ-ರಾಷ್ಟ್ರೀಯವಾದಿ ಮೈತ್ರಿಕೂಟಕ್ಕೆ ಒಟ್ಟು 53 ಸ್ಥಾನಗಳು ಮಾತ್ರ ಲಭಿಸಿವೆ.
ಐಸೆನ್ಕೋಟ್ ನೇತೃತ್ವದ ನೆತನ್ಯಾಹು ವಿರೋಧಿ ಮೈತ್ರಿಕೂಟದಲ್ಲಿ ಮಧ್ಯಮ ಎಡಪಂಥೀಯರಿಂದ ಬಲಪಂಥೀಯ ಸಿದ್ಧಾಂತದವರೆಗಿನ ನಾಲ್ಕು ಯಹೂದಿ ಪಕ್ಷಗಳು ಸೇರಿದ್ದವು. ಚುನಾವಣೆಗೆ ಮುನ್ನ ಈ ಎರಡು ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದವು. ಆದರೆ, ಐಸೆನ್ಕೋಟ್ ನೇತೃತ್ವದ ಮೈತ್ರಿಕೂಟಕ್ಕೆ 48 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ.
ಇಸ್ರೇಲ್ ನ ಅರಬ್ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಎರಡು ಪಕ್ಷಗಳು ಒಟ್ಟು 19 ಸ್ಥಾನಗಳನ್ನು ಗೆದ್ದಿವೆ. ಇದು ಈ ಪಕ್ಷಗಳ ಪಾಲಿಗೆ ಅಭೂತಪೂರ್ವ ಸಾಧನೆಯಾಗಿದೆ.
ಮಿತ್ರಪಕ್ಷದ ಬೆಂಬಲಕ್ಕೂ ಹಿಂದೇಟು
ನೆತನ್ಯಾಹು ಅವರಿಗೆ ಗುರುವಾರ ಮತ್ತೊಂದು ಹಿನ್ನಡೆಯಾಗಿದೆ. ಕಟ್ಟರ್ ಧಾರ್ಮಿಕ ಯಹೂದಿ ಮತದಾರರನ್ನು ಪ್ರತಿನಿಧಿಸುವ ಎರಡು ಪ್ರಮುಖ ಪಕ್ಷಗಳ ಪೈಕಿ ಒಂದಾದ 'ಯುನೈಟೆಡ್ ತೋರಾ ಜುದಾಯಿಸಂ', ಸರಕಾರ ರಚನೆಗೆ ಯಾವುದೇ ಅಭ್ಯರ್ಥಿಯ ಹೆಸರನ್ನು ಶಿಫಾರಸು ಮಾಡಲು ನಿರಾಕರಿಸಿದೆ.
ದೀರ್ಘಕಾಲದಿಂದ ನೆತನ್ಯಾಹು ಅವರ ಮೈತ್ರಿಕೂಟದ ಮಿತ್ರಪಕ್ಷವಾಗಿದ್ದ ಈ ಪಕ್ಷವು, ಅಧ್ಯಕ್ಷ ಹರ್ಜೋಗ್ ಅವರೊಂದಿಗಿನ ಸಮಾಲೋಚನೆ ವೇಳೆ ಈ ನಿಲುವು ವ್ಯಕ್ತಪಡಿಸಿದೆ.
ಐಸೆನ್ಕೋಟ್ ಕೂಡ ನೆತನ್ಯಾಹು ಅವರಂತೆಯೇ ಇಸ್ರೇಲ್ ನ ಎರಡು ಅರಬ್ ನೇತೃತ್ವದ ಪಕ್ಷಗಳೊಂದಿಗೆ ಸೇರಿ ಸರಕಾರ ರಚಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೂ, ಈ ಎರಡೂ ಪಕ್ಷಗಳು ಐಸೆನ್ಕೋಟ್ ಅವರನ್ನು ಬೆಂಬಲಿಸಿವೆ. ಇದರಿಂದಾಗಿ ಅವರಿಗೆ ಸಂಸತ್ತಿನ 120 ಸದಸ್ಯರ ಪೈಕಿ 67 ಮಂದಿಯ ಬೆಂಬಲ ದೊರೆತಿದೆ.
ಚುನಾವಣಾ ಫಲಿತಾಂಶದ ಬಗ್ಗೆ ಅನುಮಾನ: ನೆತನ್ಯಾಹು ವಿರುದ್ಧ ಆರೋಪ
ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ನೆತನ್ಯಾಹು, ಮತದಾನದಲ್ಲಿ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಚುನಾವಣಾ ಅಧಿಕಾರಿಗಳು ನಡೆಸುತ್ತಿರುವ ತನಿಖೆಯನ್ನು ಮುಂದಿಟ್ಟುಕೊಂಡು ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅರಬ್ ನೇತೃತ್ವದ ಪಕ್ಷಗಳು ಮತಗಳನ್ನು ಕದ್ದಿವೆ ಎಂದು ಆರೋಪಿಸಿದ್ದಾರೆ.
ನೆತನ್ಯಾಹು ಮತ್ತು ಅವರ ಮೈತ್ರಿಕೂಟದ ಪಾಲುದಾರರು ಚುನಾವಣಾ ಫಲಿತಾಂಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಾಕಾರರು ಆರೋಪಿಸಿದ್ದಾರೆ. ಆದರೆ, ನೆತನ್ಯಾಹು ಈ ಆರೋಪವನ್ನು ನಿರಾಕರಿಸಿದ್ದಾರೆ.
ಇಸ್ರೇಲ್ ನ ಕೇಂದ್ರ ಚುನಾವಣಾ ಸಮಿತಿಯು ಬುಧವಾರ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಸಮಿತಿಯ ಮುಖ್ಯಸ್ಥರೂ ಆಗಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೋಮ್ ಸೋಹ್ಲ್ಬರ್ಗ್ ಅವರು, ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ನಂಬಿಕೆಯನ್ನು ಅಲುಗಾಡಿಸುವ ಬದಲು ಅದನ್ನು ಕಾಪಾಡಬೇಕು ಎಂದು ಕರೆ ನೀಡಿದ್ದಾರೆ.
'ಇದು ನಿಜವಾದ ಅಪಾಯವಾಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಡಿಪಾಯಗಳಲ್ಲಿ ಒಂದಾದ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ' ಎಂದು ಸೋಹ್ಲ್ ಬರ್ಗ್ ಅವರು ಬುಧವಾರ ಅಧ್ಯಕ್ಷ ಹರ್ಜೋಗ್ ಅವರ ನಿವಾಸದಲ್ಲಿ ಹೇಳಿದರು.
ಅರಬ್ ಅಲ್ಪಸಂಖ್ಯಾತರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಅವರು ಬಣ್ಣಿಸಿದರು.
ಇದೇ ವೇಳೆ, ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಸೇರಿದಂತೆ ನೆತನ್ಯಾಹು ಅವರ ಬಲಪಂಥೀಯ ಮಿತ್ರಪಕ್ಷಗಳ ನಾಯಕರು, ಅರಬ್ ಪಕ್ಷಗಳ ಮುಖಂಡರನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.






