ಗಾಯಗೊಂಡ ಫೆಲೆಸ್ತೀನ್ ಪ್ರಜೆಯನ್ನು ಜೀಪಿಗೆ ಕಟ್ಟಿ ಎಳೆದೊಯ್ದ ಇಸ್ರೇಲ್ ಯೋಧರು | ವೀಡಿಯೊ ವೈರಲ್, ಇಸ್ರೇಲ್ ಸೇನೆ ವಿಷಾದ

PC: X/@swilkinsonbc
ಗಾಝಾ: ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆ ಸಂದರ್ಭ ಗಾಯಗೊಂಡ ಫೆಲೆಸ್ತೀನಿ ಪ್ರಜೆಯನ್ನು ಯೋಧರು ಜೀಪಿಗೆ ಕಟ್ಟಿ ಎಳೆದೊಯ್ಯುತ್ತಿರುವ ವೀಡಿಯೊ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರಕರಣದ ಬಗ್ಗೆ ಇಸ್ರೇಲ್ ಮಿಲಿಟರಿ ವಿಷಾದ ಸೂಚಿಸಿದೆ. ಶಂಕಿತ ಭಯೋತ್ಪಾದಕರ ವಿರುದ್ಧ ಜೆನಿನ್ನ ವಾಡಿ ಬುರ್ಖಿನ್ ಪ್ರದೇಶದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಯೋಧರ ಮೇಲೆ ಗುಂಡಿನ ದಾಳಿ ಆರಂಭಗೊಂಡಿದೆ. ಇದಕ್ಕೆ ಪ್ರತಿಯಾಗಿ ಯೋಧರು ದಾಳಿ ನಡೆಸಿದಾಗ ಓರ್ವ ಫೆಲೆಸ್ತೀನಿ ಪ್ರಜೆ ಗಾಯಗೊಂಡಿದ್ದು ಸೆರೆಸಿಕ್ಕಿದ್ದಾನೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ. ಜೆನಿನ್ ನಿವಾಸಿಯೊಬ್ಬನನ್ನು ಮಿಲಿಟರಿ ಜೀಪಿನ ಬಾನೆಟ್ ಮೇಲೆ ಅಡ್ಡಲಾಗಿ ಕಟ್ಟಿ ಕರೆದೊಯ್ಯುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಇಸ್ರೇಲ್ ಸೇನೆ ` ಪ್ರಮಾಣಿತ ಕಾರ್ಯವಿಧಾನ ಮತ್ತು ಕಾನೂನನ್ನು ಉಲ್ಲಂಘಿಸಿ, ಶಂಕಿತನನ್ನು ಜೀಪಿನ ಮೇಲೆ ಕಟ್ಟಿ ಕರೆದೊಯ್ಯಲಾಗಿದೆ. ವೀಡಿಯೊದಲ್ಲಿ ಕಂಡುಬಂದಿರುವ ಪಡೆಗಳ ನಡವಳಿಕೆಯು ಐಡಿಎಫ್(ಮಿಲಿಟರಿ) ಮೌಲ್ಯಗಳ ಉಲ್ಲಂಘನೆಯಾಗಿದೆ. ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಫೆಲೆಸ್ತೀನಿಯನ್ ರೆಡ್ಕ್ರೆಸೆಂಟ್ಗೆ ದಾಖಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.







