ಲೆಬನಾನ್ ಮೇಲೆ ಇಸ್ರೇಲ್ ದಾಳಿ | 4 ಹಿಝ್ಬುಲ್ಲಾ ಹೋರಾಟಗಾರರ ಸಾವು
ಸಾಂದರ್ಭಿಕ ಚಿತ್ರ |
ಬೈರೂತ್ : ದಕ್ಷಿಣ ಲೆಬನಾನ್ನಲ್ಲಿ ಕಾರೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಝ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ 4 ಸದಸ್ಯರು ಸಾವನ್ನಪ್ಪಿರುವುದಾಗಿ ಲೆಬನಾನ್ನ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಅಕ್ಟೋಬರ್ 7ರಂದು ಗಾಝಾ ಯುದ್ಧ ಆರಂಭವಾದಂದಿನಿಂದ ಇಸ್ರೇಲ್-ಹಿಝ್ಬುಲ್ಲಾ ನಡುವಿನ ಸಂಘರ್ಷವೂ ಉಲ್ಬಣಿಸಿದ್ದು ಮತ್ತೊಂದು ಯುದ್ಧವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಲೆಬನಾನ್ನಲ್ಲಿ ಹಿಝ್ಬುಲ್ಲಾಗಳ ನೆಲೆಯನ್ನು ಗುರಿಯಾಗಿಸಿ ಇಸ್ರೇಲ್ ಫಿರಂಗಿ, ಡ್ರೋನ್ ಹಾಗೂ ವೈಮಾನಿಕ ದಾಳಿ ನಡೆಸುತ್ತಿದ್ದರೆ, ಹಿಝ್ಬುಲ್ಲಾಗಳು ಉತ್ತರ ಇಸ್ರೇಲ್ನತ್ತ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸುತ್ತಿವೆ.
ಉತ್ತರ ಇಸ್ರೇಲ್ನ ಗಡಿಭಾಗದ ಪ್ರದೇಶಗಳ ಮೇಲೆ ಹಿಝ್ಬುಲ್ಲಾಗಳ ನಿರಂತರ ಕ್ಷಿಪಣಿ ದಾಳಿಯು ಸ್ಥಳೀಯರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದನ್ನು ಅನಿವಾರ್ಯಗೊಳಿಸಿದೆ. ರಾಜತಾಂತ್ರಿಕ ಮಾರ್ಗ ಅಥವಾ ಮಿಲಿಟರಿ ಉಪಕ್ರಮದ ಮೂಲಕ ಈ ಸಮಸ್ಯೆಯನ್ನು ಅತೀ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಇಸ್ರೇಲ್ನ ಭದ್ರತಾ ಸಚಿವ ಯೊವಾವ್ ಗ್ಯಾಲಂಟ್ ಬುಧವಾರ ಹೇಳಿದ್ದರು. ಗಾಝಾದಲ್ಲಿ ಇಸ್ರೇಲ್ ನಡೆಸುವ ಆಕ್ರಮಣವನ್ನು ಅಂತ್ಯಗೊಳಿಸಿದರೆ ತಾನೂ ದಾಳಿ ನಿಲ್ಲಿಸುವುದಾಗಿ ಹಿಝ್ಬುಲ್ಲಾ ಹೇಳುತ್ತಿದೆ.
ಈ ಮಧ್ಯೆ, ಗುರುವಾರ ಬೆಳಿಗ್ಗೆ ಸಿರಿಯಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾಕ್ನ ಅಲ್-ನುಜಾಬ ಸಶಸ್ತ್ರ ಸಂಘಟನೆಯ ನೆಲೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಸಿರಿಯಾ ರಾಜಧಾನಿ ದಮಾಸ್ಕಸ್ನ ದಕ್ಷಿಣದ ಸಯಿದಾ ಝೈನಾಬ್ ಪ್ರದೇಶದಲ್ಲಿರುವ ಅಲ್-ನುಜಾಬ ತರಬೇತಿ ಕೇಂದ್ರ ಹಾಗೂ ಸಾಂಸ್ಕೃತಿಕ ಕೇಂದ್ರವನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಂಘಟನೆಯ ಮೂವರು ಸದಸ್ಯರು ಗಾಯಗೊಂಡಿರುವುದಾಗಿ ಮಾನವ ಹಕ್ಕುಗಳ ಸಿರಿಯನ್ ವೀಕ್ಷಣಾಲಯ ಮಾಹಿತಿ ನೀಡಿದೆ. ಇರಾಕ್ ಮೂಲದ ಅಲ್-ನುಜಾಬ ಸಂಘಟನೆ ಇರಾನ್ ಪರ ಸಶಸ್ತ್ರ ಹೋರಾಟಗಾರರ ಜತೆ ಸಂಪರ್ಕ ಹೊಂದಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ