ಗಾಝಾ ಮೇಲೆ ಇಸ್ರೇಲ್ ದಾಳಿ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಮೃತ್ಯು

Photo Credit : AP
ಗಾಝಾ: ಗಾಝಾ ಪಟ್ಟಿಯ ಮೇಲೆ ಗುರುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆಸ್ಪತ್ರೆ ಹಾಗೂ ಭದ್ರತಾ ಮೂಲಗಳು ತಿಳಿಸಿವೆ.
ಉತ್ತರ ಗಾಝಾ ಪಟ್ಟಿಯ ಬೈತ್ ಲಾಹಿಯಾ ಯೋಜನಾ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಅಹ್ಮದ್ ಕುಟುಂಬದ ನಾಲ್ವರು ಸದಸ್ಯರ ದೇಹಗಳು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಗಾಝಾ ನಗರದ ಅಲ್ ಶಿಫಾ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಮೃತಪಟ್ಟ ಮಕ್ಕಳಿಗೆ 12 ಮತ್ತು 8 ವರ್ಷ ವಯಸ್ಸಾಗಿತ್ತು ಎಂದು ಆಸ್ಪತ್ರೆ ಹೇಳಿದೆ.
ಆದರೆ, ಈ ಆರೋಪವನ್ನು ಇಸ್ರೇಲ್ ಸೇನೆ ಅಲ್ಲಗಳೆದಿದೆ. ‘ಈ ಹಿಂದೆ ಬಂಡುಆ ಕಾರ್ಯಾಚರಣೆ ನಡೆಸುತ್ತಿದ್ದ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ಅದು ಹೇಳಿದೆ.
‘ಕದನ ವಿರಾಮ ಉಲ್ಲಂಘಿಸಿ ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) ಜತೆ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿದ್ದ ಸೇನಾ ಯೋಧ ಮುವಾಮೆನ್ ಅಬ್ದ್ ಅಲ್-ರಹ್ಮಾನ್ ಅಹ್ಮದ್ನನ್ನು ಹತ್ಯೆಗೈಯಲಾಗಿದೆ’ ಎಂದೂ ಇಸ್ರೇಲ್ ಸೇನೆ ತಿಳಿಸಿದೆ.
ಆದರೆ, ಗಾಝಾ ಪಟ್ಟಿಯಲ್ಲಿ ಕದನ ವಿರಾಮ ಉಲ್ಲಂಘಿಸುವುದನ್ನು ಇಸ್ರೇಲ್ ಮುಂದುವರಿಸಿದೆ ಎಂದು ಗಾಝಾ ಭದ್ರತಾ ಪಡೆಗಳು ಪ್ರತ್ಯಾರೋಪ ಮಾಡಿವೆ.






