ಫೆಲೆಸ್ತೀನಿನ ಕೈದಿಗಳಿಗೆ ಸಾಕಷ್ಟು ಆಹಾರ ನೀಡಲು ಸರಕಾರ ವಿಫಲ : ಇಸ್ರೇಲ್ ಸುಪ್ರೀಂಕೋರ್ಟ್ ತೀರ್ಪು

ಸಾಂದರ್ಭಿಕ ಚಿತ್ರ
ಟೆಲ್ ಅವೀವ್, ಸೆ.8: ಇಸ್ರೇಲ್ ನ ಜೈಲಿನಲ್ಲಿರುವ ಫೆಲೆಸ್ತೀನಿಯನ್ ಕೈದಿಗಳಿಗೆ ಮೂಲ ಜೀವನಾಧಾರಕ್ಕೆ ಸಾಕಷ್ಟು ಆಹಾರವನ್ನು ನೀಡಲು ಸರಕಾರ ವಿಫಲವಾಗಿದೆ ಎಂದು ಇಸ್ರೇಲ್ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ಕೈದಿಗಳ ಆಹಾರದಲ್ಲಿ ಪೋಷಕಾಂಶವನ್ನು ಸುಧಾರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
ಸುಮಾರು ಎರಡು ವರ್ಷಗಳಿಂದ ಗಾಝಾದಲ್ಲಿ ನಡೆಯುತ್ತಿರುವ ಯುದ್ಧದ ಸಂದರ್ಭ ಸರಕಾರದ ನಡವಳಿಕೆಯ ವಿರುದ್ಧ ದೇಶದ ಪರಮೋಚ್ಛ ನ್ಯಾಯಾಲಯ ತೀರ್ಪು ನೀಡಿರುವ ಅಪರೂಪದ ಪ್ರಕರಣ ಇದಾಗಿದೆ.
ಕಳೆದ ವರ್ಷ ಇಸ್ರೇಲ್ ನ `ನಾಗರಿಕ ಹಕ್ಕುಗಳ ಸಂಘಟನೆ' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಗಾಝಾ ಯುದ್ಧ ಆರಂಭಗೊಂಡ ಬಳಿಕ ಆಹಾರ ನೀತಿಯಲ್ಲಿ ಆಗಿರುವ ಬದಲಾವಣೆಯು ಕೈದಿಗಳನ್ನು ಅಪೌಷ್ಠಿಕತೆ ಮತ್ತು ಉಪವಾಸದಿಂದ ಬಳಲುವಂತೆ ಮಾಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಯುದ್ಧ ಆರಂಭಗೊಂಡಂದಿನಿಂದ ಹಮಾಸ್ ಜೊತೆಗೆ ಸಂಪರ್ಕ ಹೊಂದಿರುವ ಶಂಕೆಯಲ್ಲಿ ಗಾಝಾದಲ್ಲಿ ಸಾವಿರಾರು ಜನರನ್ನು ಇಸ್ರೇಲ್ ಬಂಧಿಸಿದೆ. ಇವರನ್ನು ಬಂಧನದಲ್ಲಿ ಇಟ್ಟಿರುವ ಜೈಲಿನಲ್ಲಿ ಸಾಕಷ್ಟು ಪ್ರಮಾಣದ ಆಹಾರ, ಆರೋಗ್ಯ ರಕ್ಷಣೆಯ ಕೊರತೆ, ಕಳಪೆ ನೈರ್ಮಲ್ಯ ಪರಿಸ್ಥಿತಿಯಿದೆ ಮತ್ತು ವ್ಯಾಪಕ ದೌರ್ಜನ್ಯ ನಡೆಯುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಪ್ರತಿಪಾದಿಸಿವೆ.





