ಸ್ವೀಕಾರಾರ್ಹವಲ್ಲ : ಖತರ್ ಮೇಲಿನ ಇಸ್ರೇಲ್ ದಾಳಿಗೆ ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಜಾಗತಿಕ ರಾಷ್ಟ್ರಗಳಿಂದ ಖಂಡನೆ

Photo | Al Jazeera
ದೋಹಾ : ಖತರ್ ನ ದೋಹಾ ನಗರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯ ಬಗ್ಗೆ ಜಾಗತಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇಸ್ರೇಲ್ ದಾಳಿಯಲ್ಲಿ ಹಮಾಸ್ನ ಹಿರಿಯ ನಾಯಕ ಖಲೀಲ್ ಅಲ್ ಹಯ್ಯ ಅವರ ಪುತ್ರ ಸೇರಿದಂತೆ ಐವರು ಸದಸ್ಯರು ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಖತರ್ ಭದ್ರತಾ ಪಡೆಯ ಓರ್ವ ಸದಸ್ಯನೂ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಇಸ್ರೇಲ್ ದಾಳಿಯನ್ನು ಖತರ್ ಖಂಡಿಸಿದೆ ಮತ್ತು ದಾಳಿಯ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಇರಲಿಲ್ಲ ಎಂದು ಹೇಳಿದೆ. ಈ ಕ್ರಿಮಿನಲ್ ದಾಳಿ ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಗಂಭೀರ ಉಲ್ಲಂಘನೆಯಾಗಿದೆ. ಇದು ಖತರ್ ನಾಗರಿಕರು ಹಾಗೂ ವಿದೇಶಿ ನಿವಾಸಿಗಳ ಭದ್ರತೆಗೆ ನೇರ ಬೆದರಿಕೆ ಸೃಷ್ಟಿಸುತ್ತದೆ ಎಂದು ಖತರ್ ವಿದೇಶಾಂಗ ವ್ಯವಹಾರಗಳ ವಕ್ತಾರ ಮಜೀದ್ ಅಲ್ ಅನ್ಸಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫ್ರಾನ್ಸ್ ಈ ದಾಳಿಯನ್ನು ಸ್ವೀಕಾರಾರ್ಹವಲ್ಲ ಎಂದು ಕರೆದಿದೆ. ಇಸ್ರೇಲ್ ದಾಳಿಯು ಖತರ್ ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಇಂಗ್ಲೆಂಡ್ ಹೇಳಿದೆ. ಸೌದಿ ಅರೇಬಿಯಾ ಇಸ್ರೇಲ್ ದಾಳಿಯನ್ನು ಕ್ರೂರ ಆಕ್ರಮಣ ಎಂದು ಖಂಡಿಸಿದೆ.
ಖತರ್ ಮೇಲಿನ ಇಸ್ರೇಲ್ ದಾಳಿಯನ್ನು ತುರ್ಕಿಯೆ ವಿದೇಶಾಂಗ ಸಚಿವಾಲಯ ಖಂಡಿಸಿದೆ. ಗಾಝಾ ಮೇಲಿನ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದದಲ್ಲಿ ಇಸ್ರೇಲ್ ಆಸಕ್ತಿ ಹೊಂದಿಲ್ಲದಂತೆ ತೋರುತ್ತದೆ ಎಂದು ಹೇಳಿದೆ.
ಕದನ ವಿರಾಮ ಮಾತುಕತೆಗಳು ಮುಂದುವರಿದಿರುವಾಗ ಹಮಾಸ್ ಸಮಾಲೋಚಕರ ನಿಯೋಗವನ್ನು ಗುರಿಯಾಗಿಸಿಕೊಂಡಿರುವುದು ಇಸ್ರೇಲ್ ಶಾಂತಿಯನ್ನು ತಲುಪುವ ಗುರಿಯನ್ನು ಹೊಂದಿಲ್ಲ, ಬದಲಿಗೆ ಯುದ್ಧವನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ ಎಂದು ತೋರಿಸುತ್ತದೆ ಎಂದು ತುರ್ಕಿಯೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ವಾಯುದಾಳಿಗಳನ್ನು ಖತರ್ ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಸ್ಪಷ್ಟ ಉಲ್ಲಂಘನೆ ಎಂದು ಕರೆದರು. ಕದನ ವಿರಾಮದ ನಿರೀಕ್ಷೆಗಳನ್ನು ನಾಶಮಾಡುವ ಬದಲು ಶಾಶ್ವತ ಕದನ ವಿರಾಮವನ್ನು ಸಾಧಿಸುವತ್ತ ಕೆಲಸ ಮಾಡಬೇಕು ಎಂದು ಹೇಳಿದರು.
ಖತರ್ ದೋಹಾ ನಗರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯ ಬಗ್ಗೆ ಭಾರತ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಎಲ್ಲಾ ದೇಶಗಳು ಸಂಯಮ ಸಾಧಿಸಬೇಕು ಮತ್ತು ಈ ಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸದಂತೆ ತಡೆಯಲು ರಾಜತಾಂತ್ರಿಕ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿತ್ತು.







