ಇಸ್ರೇಲ್ ನ E1 ವಸಾಹತು ಯೋಜನೆ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ: ಮುಸ್ಲಿಂ ಕೌನ್ಸಿಲ್

Photo: x.com/thetribunechd
ಅಬುಧಾಬಿ: ಇಸ್ರೇಲ್ ನ ‘E1’ ವಸಾಹತು ಯೋಜನೆಯನ್ನು ಅಬುಧಾಬಿ ಮೂಲದ ಮುಸ್ಲಿಂ ಕೌನ್ಸಿಲ್ ಆಫ್ ಎಲ್ಡರ್ಸ್ ಖಂಡಿಸಿದೆ. ಈ ಯೋಜನೆಯು ‘ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ಕೌನ್ಸಿಲ್ ಹೇಳಿದೆ ಎಂದು Aljazeera ವರದಿ ಮಾಡಿದೆ.
E1 ಯೋಜನೆಯ ಮೂಲಕ ಜೆರುಸಲೆಮ್ ನಿಂದ ಪಶ್ಚಿಮ ದಂಡೆಯನ್ನು ವಿಭಜಿಸುವ ಇಸ್ರೇಲ್ನ ಪ್ರಯತ್ನಗಳು, ಪ್ರದೇಶದಲ್ಲಿ ಶಾಂತಿ ಸಾಧಿಸುವ ಗುರಿ ಹೊಂದಿರುವ ಪ್ರಯತ್ನಗಳಿಗೆ ‘ಗಂಭೀರ ಬೆದರಿಕೆ’ ಎಂದು ಕೌನ್ಸಿಲ್ ಹೇಳಿದೆ.
ಈಜಿಪ್ಟ್ ನ ಅಲ್–ಅಝ್ಹರ್ ನ ಗ್ರ್ಯಾಂಡ್ ಇಮಾಮ್ ಹಾಗೂ ವಿಶ್ವದ ಪ್ರಮುಖ ಮುಸ್ಲಿಂ ವಿದ್ವಾಂಸರಲ್ಲಿ ಒಬ್ಬರಾದ ಅಹ್ಮದ್ ಎಲ್–ತಾಯೆಬ್ ಅಧ್ಯಕ್ಷತೆಯಲ್ಲಿರುವ ಕೌನ್ಸಿಲ್, ಫೆಲೆಸ್ತೀನಿಯರ ವಿರುದ್ಧ ನಡೆಯುತ್ತಿರುವ ವಸಾಹತುಗಾರರ ಹಿಂಸಾಚಾರವನ್ನೂ ಖಂಡಿಸಿದೆ. ‘ಇಸ್ರೇಲಿ ಆಕ್ರಮಣ ಅಧಿಕಾರಿಗಳ ಬೆಂಬಲದೊಂದಿಗೆ’ ಈ ಹಿಂಸಾಚಾರ ನಡೆಯುತ್ತಿದೆ ಎಂದು ಕೌನ್ಸಿಲ್ ಹೇಳಿದೆ.
ವಸಾಹತು ವಿಸ್ತರಣೆಯನ್ನು ನಿಲ್ಲಿಸಲು ಹಾಗೂ ಫೆಲೆಸ್ತೀನ್ ಜನರು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಸಮುದಾಯ ತನ್ನ ಜವಾಬ್ದಾರಿಗಳನ್ನು ವಹಿಸಿಕೊಂಡು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೌನ್ಸಿಲ್ ಕರೆ ನೀಡಿದೆ.
ಮುಸ್ಲಿಂ ಮತ್ತು ಮುಸ್ಲಿಮೇತರ ಸಮುದಾಯಗಳ ನಡುವೆ ಶಾಂತಿಯನ್ನು ಬೆಳೆಸುವುದು ಹಾಗೂ ಸಂವಾದ, ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಮುನ್ನಡೆಸುವ ಉದ್ದೇಶದಿಂದ 2014ರಲ್ಲಿ ಅಬುಧಾಬಿಯಲ್ಲಿ ಮುಸ್ಲಿಂ ಕೌನ್ಸಿಲ್ ಆಫ್ ಎಲ್ಡರ್ಸ್ ಸ್ಥಾಪನೆಯಾಗಿದೆ. ಕೌನ್ಸಿಲ್ ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿಕೊಂಡಿದೆ.






