ಇಸ್ರೇಲ್ ನ ಭದ್ರತಾ ಮುಖ್ಯಸ್ಥರ ವಜಾ ಕಾನೂನುಬಾಹಿರ: ಸುಪ್ರೀಂಕೋರ್ಟ್ ತೀರ್ಪು

Photo Credit: Reuters
ಜೆರುಸಲೇಂ: ಇಸ್ರೇಲ್ ನ ಆಂತರಿಕ ಭದ್ರತಾ ಮುಖ್ಯಸ್ಥ ರೊನೆನ್ ಬಾರ್ ಅವರನ್ನು ಮಾರ್ಚ್ನಲ್ಲಿ ವಜಾಗೊಳಿಸಿರುವ ಸರಕಾರದ ನಿರ್ಧಾರ ಕಾನೂನುಬಾಹಿರ ಎಂದು ಇಸ್ರೇಲ್ ನ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಶಿನ್ ಬೆಟ್(ಆಂತರಿಕ ಭದ್ರತಾ ಸಮಿತಿ) ಮುಖ್ಯಸ್ಥರ ಅಧಿಕಾರಾವಧಿಯನ್ನು ಮುಕ್ತಾಯಗೊಳಿಸುವ ಸರ್ಕಾರದ ನಿರ್ಧಾರವನ್ನು ಅನುಚಿತ ಮತ್ತು ಕಾನೂನುಬಾಹಿರ ಪ್ರಕ್ರಿಯೆಯ ಮೂಲಕ ಮಾಡಲಾಗಿದೆ. ಜೊತೆಗೆ ಆಂತರಿಕ ಭದ್ರತೆಗೆ ಸಂಬಂಧಿಸಿದ ಮೂಲಭೂತ ತತ್ವಗಳನ್ನು ಕಡೆಗಣಿಸಲಾಗಿರುವುದನ್ನು ಗಮನಿಸಲಾಗಿದೆ ಎಂದು ಸುಪ್ರೀಂಕೋರ್ಟ್ ನ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯದ ತೀರ್ಪು ಹೊರಬಿದ್ದ ಬೆನ್ನಲ್ಲೇ, ಆಂತರಿಕ ಭದ್ರತಾ ಏಜೆನ್ಸಿಗೆ ಪ್ರಧಾನಿ ನೆತನ್ಯಾಹು ಹೊಸ ಮುಖ್ಯಸ್ಥರನ್ನು ನೇಮಕಗೊಳಿಸುವುದಕ್ಕೆ ಇಸ್ರೇಲ್ ನ ಅಟಾರ್ನಿ ಜನರಲ್ ತಡೆನೀಡಿದ್ದಾರೆ. ಆದರೆ, ಅಟಾರ್ನಿ ಜನರಲ್ ಅವರ ಘೋಷಣೆಯ ಹೊರತಾಗಿಯೂ ಶಿನ್ ಬೆಟ್ಗೆ ಹೊಸ ಮುಖ್ಯಸ್ಥರನ್ನು ತನ್ನ ಸರಕಾರ ನೇಮಕಗೊಳಿಸಲಿದೆ ಎಂದು ನೆತನ್ಯಾಹು ಹೇಳಿದ್ದಾರೆ. ರೊನೆನ್ ಬಾರ್ ಅವರನ್ನು ವಜಾಗೊಳಿಸುವುದನ್ನು ವಿರೋಧಿಸಿ ವಿಪಕ್ಷಗಳ ನೇತೃತ್ವದಲ್ಲಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು.





