BBC ಗಾಝಾ ಯುದ್ಧದ ವರದಿಗಾರಿಕೆಯಲ್ಲಿ ಇಸ್ರೇಲ್ ಪರ ಒಲವು ತೋರಿಸುತ್ತಿದೆ: 100ಕ್ಕೂ ಹೆಚ್ಚು ಸಿಬ್ಬಂದಿಗಳ ಆರೋಪ

PC : aljazeera.com
ಲಂಡನ್: ಬಿಬಿಸಿ (BBC) ಗಾಝಾ ಯುದ್ಧದ ಕುರಿತು ತನ್ನ ವರದಿಗಾರಿಕೆಯಲ್ಲಿ ಇಸ್ರೇಲ್ ಪರ ಒಲವು ತೋರಿಸುತ್ತಿದೆ ಎಂದು ಆರೋಪಿಸಿರುವ ಸಂಸ್ಥೆಯ ನೂರಕ್ಕೂ ಅಧಿಕ ಸಿಬ್ಬಂದಿಗಳು, ಅದರ ‘ನಿಖರವಾದ ಪುರಾವೆ ಆಧಾರಿತ ಪತ್ರಿಕೋದ್ಯಮ’ದ ಕೊರತೆಯನ್ನು ಟೀಕಿಸಿದ್ದಾರೆ ಎಂದು aljazeera.com ವರದಿ ಮಾಡಿದೆ.
ಬಿಬಿಸಿಯ ಮಹಾ ನಿರ್ದೇಶಕ ಟಿಮ್ ಡೇವಿ ಮತ್ತು ಸಿಇಒ ಡೆಬೋರಾ ಟರ್ನೆಸ್ಗೆ ಶುಕ್ರವಾರ ಬರೆದಿರುವ ಪತ್ರದಲ್ಲಿ,‘ತನ್ನ ಕ್ರಮಗಳಿಗಾಗಿ ಇಸ್ರೇಲ್ ಅನ್ನು ಹೊಣೆಯಾಗಿಸುವ ವಿಷಯದಲ್ಲಿ ಮೂಲ ಪ್ರತಿಕೋದ್ಯಮದ ತತ್ವಗಳ ಕೊರತೆಯಿದೆ’ ಎಂದು ಬೆಟ್ಟು ಮಾಡಲಾಗಿದೆ.
ಪತ್ರಕ್ಕೆ ಸಹಿ ಹಾಕಿದವರಲ್ಲಿ ಬಿಬಿಸಿಯ ನೂರಕ್ಕೂ ಅಧಿಕ ಅನಾಮಧೇಯ ಸಿಬ್ಬಂದಿಗಳು ಹಾಗೂ 200ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು, ಇತಿಹಾಸಕಾರರು,ಕಲಾವಿದರು,ಶಿಕ್ಷಣತಜ್ಞರು ಮತ್ತು ರಾಜಕಾರಣಿಗಳು ಸೇರಿದ್ದಾರೆ.
ಅಸಮರ್ಪಕ ವರದಿಗಾರಿಕೆಯ ಪರಿಣಾಮಗಳು ಗಮನಾರ್ಹವಾಗಿವೆ. ಪ್ರತಿಯೊಂದೂ ದೂರದರ್ಶನ ವರದಿ,ಲೇಖನ ಮತ್ತು ರೇಡಿಯೊ ಸಂದರ್ಶನ ಫೆಲೆಸ್ತೀನಿಗಳನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಂಡಿರುವ ಇಸ್ರೇಲ್ ಅನ್ನು ದೃಢವಾಗಿ ಪ್ರಶ್ನಿಸುವಲ್ಲಿ ವಿಫಲಗೊಂಡಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಇಸ್ರೇಲ್ ಬಾಹ್ಯ ಪತ್ರಕರ್ತರಿಗೆ ಗಾಝಾಕ್ಕೆ ಪ್ರವೇಶವನ್ನು ನೀಡುವುದಿಲ್ಲ ಎನ್ನುವುದನ್ನು ಪುನರುಚ್ಚರಿಸುವುದು,ಇಸ್ರೇಲಿ ಹೇಳಿಕೆಗಳನ್ನು ಸಮರ್ಥಿಸುವ ಸಾಕಷ್ಟು ಪುರಾವೆಗಳಿಲ್ಲದಿದ್ದಾಗ ಅದನ್ನು ಸ್ಪಷ್ಟಪಡಿಸುವುದು,ಇಸ್ರೇಲ್ ಅಪರಾಧಿಯಾಗಿರುವಾಗ ಲೇಖನದ ಮುಖ್ಯಾಂಶಗಳಲ್ಲಿ ಅದನ್ನು ಸ್ಪಷ್ಟವಾಗಿ ಹೇಳುವುದು,ಎಲ್ಲ ಸಂದರ್ಶನಗಳಲ್ಲಿ ಇಸ್ರೇಲಿ ಸರಕಾರ ಮತ್ತು ಮಿಲಿಟರಿ ಪ್ರತಿನಿಧಿಗಳನ್ನು ದೃಢವಾಗಿ ಪ್ರಶ್ನಿಸುವುದು ಸೇರಿದಂತೆ ಸಂಪಾದಕೀಯ ಬದ್ಧತೆಗಳನ್ನು ಅನುಸರಿಸುವಂತೆ ಪತ್ರದಲ್ಲಿ ಬಿಬಿಸಿಗೆ ಕರೆ ನೀಡಲಾಗಿದೆ.
ಬಿಬಿಸಿ,ಐಟಿವಿ ಮತ್ತು ಸ್ಕೈನಂತಹ ಬ್ರಿಟಿಷ್ ಮಾಧ್ಯಮ ಸಂಸ್ಥೆಗಳಲ್ಲಿ ಸಾರ್ವಜನಿಕರು ಹೆಚ್ಚಿನ ನಂಬಿಕೆಯನ್ನಿಟ್ಟಿದ್ದಾರೆ ಮತ್ತು ನಿರ್ಭಯವಾಗಿ ಸಾಕ್ಷ್ಯಗಳನ್ನು ಅನುಸರಿಸುವುದು ಅವುಗಳ ಕರ್ತವ್ಯವಾಗಿದೆ ಎಂದಿರುವ ಪತ್ರವು, ಬಿಬಿಸಿ ಪರವಾನಿಗೆ ಶುಲ್ಕಗಳನ್ನು ಸಂಗ್ರಹಿಸುತ್ತದೆ ಮತ್ತು ಅದರ ಸ್ವಂತ ಸಂಪಾದಕೀಯ ಮಾನದಂಡಗಳ ಸವೆತವು ಅದರ ನಿಸ್ಪಕ್ಷತೆ ಮತ್ತು ಸ್ವಾತಂತ್ರ್ಯವನ್ನು ಗಂಭೀರ ಅಪಾಯಕ್ಕೆ ಸಿಲುಕಿಸಿದೆ ಎಂದು ಬೆಟ್ಟು ಮಾಡಿದೆ.
ಗಾಝಾ ಯುದ್ಧದ ತನ್ನ ವರದಿಗಾರಿಕೆಯನ್ನು ಬಿಬಿಸಿ ಸಮರ್ಥಿಸಿಕೊಂಡಿದೆ.
‘ನಾವು ತಪ್ಪುಗಳನ್ನು ಮಾಡಿದಾಗ ಮತ್ತು ನಮ್ಮ ವರದಿಗಾರಿಕೆ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿದಾಗ ನಾವು ಪಾರದರ್ಶಕರಾಗಿರುತ್ತೇವೆ. ಗಾಝಾಕ್ಕೆ ಪ್ರವೇಶ ಕೊರತೆ,ಲೆಬನಾನ್ನ ಕೆಲವು ಭಾಗಗಳಿಗೆ ಪ್ರವೇಶ ನಿರ್ಬಂಧ ಮತ್ತು ಆ ಪ್ರದೇಶಗಳಲ್ಲಿ ವರದಿಗಾರರನ್ನು ಪಡೆಯಲು ನಮ್ಮ ನಿರಂತರ ಪ್ರಯತ್ನಗಳು ಸೇರಿದಂತೆ ನಮ್ಮ ವರದಿಗಾರಿಕೆಯ ಮೇಲಿನ ಮಿತಿಗಳ ಕುರಿತಂತೆ ನಾವು ನಮ್ಮ ವೀಕ್ಷಕರೊಂದಿಗೆ ಅತ್ಯಂತ ಸ್ಪಷ್ಟವಾಗಿದ್ದೇವೆ ’ ಎಂದು ಬಿಬಿಸಿಯ ವಕ್ತಾರರನ್ನು ಉಲ್ಲೇಖಿಸಿ ಬ್ರಿಟನ್ನಿನ ಮಾಧ್ಯಮಗಳು ವರದಿ ಮಾಡಿವೆ.







