ರಮಝಾನ್ ಮಾಸ, ಪಾಸ್ ಓವರ್ ಅವಧಿಯಲ್ಲಿ ಕದನ ವಿರಾಮ ವಿಸ್ತರಣೆ ಪ್ರಸ್ತಾವ: ಇಸ್ರೇಲ್ ಸಮ್ಮತಿ, ಹಮಾಸ್ ನಕಾರ

Photo:x/@alijadallah66
ಟೆಲ್ ಅವೀವ್/ಗಾಝಾ: ಒತ್ತೆಯಾಳುಗಳ ಬಿಡುಗಡೆಗೆ ಬದಲಿಯಾಗಿ ರಮಝಾನ್ ಮಾಸ ಹಾಗೂ ಯಹೂದಿಗಳ ಪಾಸ್ ಓವರ್ ಹಬ್ಬದ ಸಂದರ್ಭದಲ್ಲಿ ಮೊದಲ ಹಂತದ ಕದನ ವಿರಾಮವನ್ನು ತಾತ್ಕಾಲಿಕವಾಗಿ ವಿಸ್ತರಿಸುವ ಅಮೆರಿಕ ಬೆಂಬಲಿತ ಪ್ರಸ್ತಾವಕ್ಕೆ ಇಸ್ರೇಲ್ ಸಮ್ಮತಿ ಸೂಚಿಸಿದ್ದರೆ, ಹಮಾಸ್ ವಿರೋಧ ವ್ಯಕ್ತಪಡಿಸಿದೆ.
ಈ ಅಮೆರಿಕ ಬೆಂಬಲಿತ ಪ್ರಸ್ತಾವವನ್ನು ತಿರಸ್ಕರಿಸಿರುವ ಹಮಾಸ್, ಯುದ್ಧವನ್ನು ಅಂತ್ಯಗೊಳಿಸುವ ಹಾಗೂ ಎಲ್ಲ ಒತ್ತೆಯಾಳುಗಳನ್ನು ವಾಪಸ್ ಕರೆಸಿಕೊಳ್ಳುವ ಗುರಿ ಹೊಂದಿರುವ ಎರಡನೆ ಹಂತದ ಕದನ ವಿರಾಮ ಮಾತುಕತೆಗೆ ನೇರವಾಗಿ ಮುಂದುವರಿಯಬೇಕು ಎಂದು ಪಟ್ಟು ಹಿಡಿದಿದೆ.
ವಾಸ್ತವವಾಗಿ ಜನವರಿ 19ರಂದು ಅಂತ್ಯಗೊಳ್ಳಬೇಕಿದ್ದ ಕದನ ವಿರಾಮವು ಮಾರ್ಚ್ 1ರಂದು ಅಂತ್ಯಗೊಂಡ ನಂತರ, ಅದು ವಿಸ್ತರಣೆಗೊಂಡಿದೆ. ಇದಕ್ಕೂ ಮುನ್ನ, ಕದನವಿರಾಮವನ್ನು ಎಪ್ರಿಲ್ 20ರವರೆಗೆ ವಿಸ್ತರಿಸುವ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್ ಪ್ರಸ್ತಾವಕ್ಕೆ ಇಸ್ರೇಲ್ ಸಮ್ಮತಿ ಸೂಚಿಸಿತ್ತು.
“ರಮಝಾನ್ ಮಾಸ ಹಾಗೂ ಪಾಸ್ ಓವರ್ ಅವಧಿಯಲ್ಲಿ ತಾತ್ಕಾಲಿಕ ಕದನ ವಿರಾಮ ಜಾರಿಗೊಳಿಸುವ ಅಮೆರಿಕ ಅಧ್ಯಕ್ಷರ ರಾಯಭಾರಿ ಸ್ಟೀವ್ ವಿಟ್ಕಾಫ್ ರ ಪ್ರಸ್ತಾವವನ್ನು ಇಸ್ರೇಲ್ ಅಂಗೀಕರಿಸಿದೆ. ಈ ಪ್ರಸ್ತಾವನೆಯ ಮೊದಲ ದಿನ ಅರ್ಧದಷ್ಟು ಜೀವಂತ ಹಾಗೂ ಮೃತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು. ಒಂದು ವೇಳೆ ಶಾಶ್ವತ ಕದನ ವಿರಾಮ ಒಪ್ಪಂದವೇರ್ಪಟ್ಟರೆ, ಉಳಿದ ಜೀವಂತ ಹಾಗೂ ಮೃತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿಯ ಪ್ರಕಟಣೆಯು ಈ ನಿರ್ಧಾರವನ್ನು ದೃಢಪಡಿಸಿದೆ.
ಒತ್ತೆಯಾಳು ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಹೇಳಿರುವ ಇಸ್ರೇಲ್, ಒಂದು ವೇಳೆ ಸಂಧಾನಗಳು ವಿಫಲಗೊಂಡರೆ, ಯುದ್ಧವನ್ನು ಪುನಾರಂಭಿಸುವ ಆಯ್ಕೆಯನ್ನು ಕಾಯ್ದಿರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಆದರೆ, ಇಸ್ರೇಲ್ ಯೋಜನೆಯನ್ನು ತಳ್ಳಿ ಹಾಕಿರುವ ಹಮಾಸ್, ಇಸ್ರೇಲ್ ಯೋಜನೆಯು ಕದನ ವಿರಾಮ ಪ್ರಸ್ತಾವನೆಗೆ ವ್ಯತಿರಿಕ್ತವಾಗಿದೆ ಎಂದು ಆರೋಪಿಸಿದೆ.
ಮೊದಲ ಹಂತದ ಕದನ ವಿರಾಮವನ್ನು ವಿಸ್ತರಿಸುವ ಬದಲು, ಯುದ್ಧದ ಶಾಶ್ವತ ಅಂತ್ಯಕ್ಕಾಗಿ ಸಂಧಾನಗಳನ್ನು ಒಳಗೊಂಡಿರುವ ಎರಡನೆ ಹಂತದ ಕದನ ವಿರಾಮ ಮಾತುಕತೆಗಳಿಗೆ ಮುನ್ನಡೆಯಬೇಕು ಎಂದು ಹಮಾಸ್ ಪಟ್ಟು ಹಿಡಿದಿದೆ.
ಇಸ್ರೇಲ್ ನೊಂದಿಗಿನ ಇತ್ತೀಚಿನ ಎರಡನೆ ಹಂತದ ಕದನ ವಿರಾಮ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಹಿರಿಯ ಹಮಾಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೀರ್ಘಕಾಲೀನ ಕದನವಿರಾಮಕ್ಕೆ ಅನಿವಾರ್ಯವಾಗಿರುವ ಸಂಧಾನಗಳನ್ನು ವಿಳಂಬಗೊಳಿಸುವ ಪ್ರಯತ್ನವನ್ನು ಈ ಪ್ರಸ್ತಾವನೆ ಒಳಗೊಂಡಿದೆ ಎಂದು ಹೆಸರೇಳಲಿಚ್ಛಿಸದ ಹಮಾಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.







