ಪ್ರಧಾನಿ ಮೆಲೋನಿ ಕುರಿತು ಟ್ರಂಪ್ ಆಕ್ಷೇಪಾರ್ಹ ಹೇಳಿಕೆ: ಅಮೆರಿಕಾ ಪ್ರವಾಸ ರದ್ದುಗೊಳಿಸಿದ ಇಟಲಿ ವಿದೇಶಾಂಗ ಸಚಿವ

ಮೆಲೋನಿ | ಟ್ರಂಪ್ x.com/ynetnews
ರೋಮ್ : ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ವಿರೋಧಿಸಿ, ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಾಜಾನಿ ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಟಾಲಿಯನ್ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಗಳು ಹೊಸ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಗಿವೆ.
ಟ್ರಂಪ್ ಹೇಳಿಕೆಯನ್ನು "ಆಕ್ಷೇಪಾರ್ಹ" ಎಂದು ಕರೆದಿರುವ ತಾಜಾನಿ, ಅವರು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರನ್ನು ಭೇಟಿಯಾಗಲು ನಿಗದಿಪಡಿಸಲಾಗಿದ್ದ ತಮ್ಮ ಅಮೆರಿಕ ಪ್ರವಾಸವನ್ನು ರದ್ದುಗೊಳಿಸುತ್ತಿರುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ.
G7 ಶೃಂಗಸಭೆಯಲ್ಲಿ ಮೆಲೋನಿ ಅವರು ತನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಬೇಡಿಕೊಂಡಿದ್ದರು ಮತ್ತು ಅವರ ಮೇಲೆ ಮರುಕಗೊಂಡು ತಾವು ಅದಕ್ಕೆ ಒಪ್ಪಿರುವುದಾಗಿ ಇಟಲಿಯ La7 ಟಿವಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದರು.
ಆದರೆ ಇದನ್ನು ಅಲ್ಲಗೆಳೆದಿದ್ದ ಮೆಲೋನಿ, ಇದು ಸಂಪೂರ್ಣ ಕಟ್ಟುಕತೆ ಎಂದು ಪ್ರತಿಕ್ರಿಯಿಸಿದ್ದರು. ಶುಕ್ರವಾರ ಬೆಳಿಗ್ಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಇವುಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದು ಹೇಳಿದ್ದರು.
ಇಟಲಿ ಸಚಿವ ತಾಜಾನಿ ಮುಂದಿನ ವಾರದ ಆರಂಭದಲ್ಲಿ ಅಮೆರಿಕಕ್ಕೆ ಭೇಟಿ ನೀಡಲು ಮತ್ತು ಮಯಾಮಿಯಲ್ಲಿ ನಡೆಯಲಿರುವ 'ಇಟಲಿ-ಯುಎಸ್ ಬಿಸಿನೆಸ್, ಇನ್ವೆಸ್ಟ್ಮೆಂಟ್, ಸೈನ್ಸ್ ಅಂಡ್ ಇನ್ನೋವೇಶನ್ ಫೋರಂ'ನಲ್ಲಿ ಭಾಗವಹಿಸಲು ನಿರ್ಧರಿಸಲಾಗಿತ್ತು.
ಆರ್ಥಿಕ ಭದ್ರತೆ ಮತ್ತು ನಿರ್ಣಾಯಕ ಖನಿಜಗಳ ಕುರಿತು ಯುಎಸ್-ಇಟಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಅವರು ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ರೂಬಿಯೋ ಅವರನ್ನು ಭೇಟಿಯಾಗುವುದಾಗಿ ಹೇಳಲಾಗಿತ್ತು.






