ಇಲ್ಲಿರುವುದು ಬರೀ ಐಸ್ ಅಲ್ಲ; ವಿಶ್ವದ ಪ್ರಬಲ ರಾಷ್ಟ್ರಗಳು ಗ್ರೀನ್ಲ್ಯಾಂಡ್ ಮೇಲೆ ಕಣ್ಣಿಟ್ಟಿರುವುದೇಕೆ?

AP Photo
ಶನಿವಾರ ಅಮೆರಿಕದ ಪಡೆಗಳು ವೆನೆಝುವೆಲಾದ ರಾಜಧಾನಿಯ ಮೇಲೆ ದಾಳಿ ಮಾಡಿ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದಿದ್ದವು. ಇದರ ನಂತರದ ದಿನಗಳಲ್ಲಿ, ಡೆನ್ಮಾರ್ಕ್ ಆಳ್ವಿಕೆಯಲ್ಲಿ ಇರುವ ವಿಶಾಲ ಸ್ವಾಯತ್ತ ಆರ್ಕ್ಟಿಕ್ ಪ್ರದೇಶವಾದ ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಬಯಕೆಯನ್ನು ಅಮೆರಿಕ ವ್ಯಕ್ತಪಡಿಸಿತ್ತು. ಈ ಹೇಳಿಕೆ ಡೆನ್ಮಾರ್ಕ್ ಮತ್ತು ಗ್ರೀನ್ಲ್ಯಾಂಡ್ ಮಾತ್ರವಲ್ಲದೆ ನಾರ್ಡಿಕ್ ಹಾಗೂ ಸ್ಕ್ಯಾಂಡಿನೇವಿಯನ್ ದೇಶಗಳನ್ನೂ ಕೆರಳಿಸಿದ್ದು, ಅವರ ನಡುವೆ ಅಪರೂಪದ ಏಕತೆಯನ್ನು ಹುಟ್ಟುಹಾಕಿದೆ. ಈ ರಾಷ್ಟ್ರಗಳಲ್ಲಿನ ಹಲವರು ಅಮೆರಿಕದ ಒತ್ತಡವನ್ನು ಬಹಿರಂಗವಾಗಿ ತಿರಸ್ಕರಿಸುತ್ತಿದ್ದಾರೆ.
ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಗ್ರೀನ್ಲ್ಯಾಂಡ್ ಯಾವಾಗಲೂ ನಾರ್ಡಿಕ್ ಮತ್ತು ಸ್ಕ್ಯಾಂಡಿನೇವಿಯನ್ ದೇಶಗಳೊಂದಿಗೆ ಗಾಢ ಸಂಬಂಧ ಹೊಂದಿದೆ. ಟ್ರಂಪ್ ಆರ್ಕ್ಟಿಕ್ನಲ್ಲಿರುವ ಖನಿಜ-ಸಮೃದ್ಧ, ಸ್ವ-ಆಡಳಿತದ ಡ್ಯಾನಿಶ್ ಪ್ರದೇಶದ ಮೇಲೆ ಕಣ್ಣಿಟ್ಟಿದ್ದು, ಇದನ್ನು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಕಾರ್ಯತಂತ್ರದ ಆದ್ಯತೆಯಾಗಿ ರೂಪಿಸಿದ್ದಾರೆ. ರಷ್ಯಾ ಮತ್ತು ಚೀನಾದಂತಹ ಅಮೆರಿಕದ ವಿರೋಧಿಗಳನ್ನು ತಡೆಯುವ ಗುರಿಯೊಂದಿಗೆ “ಗ್ರೀನ್ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವುದು ಟ್ರಂಪ್ ಗೆ ರಾಷ್ಟ್ರೀಯ ಭದ್ರತಾ ಆದ್ಯತೆಯಾಗಿದೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಹೇಗಿದೆ ಗ್ರೀನ್ಲ್ಯಾಂಡ್?
836,000 ಚದರ ಮೈಲುಗಳು (2.16 ಮಿಲಿಯನ್ ಚದರ ಕಿಲೋಮೀಟರ್) ವಿಸ್ತೀರ್ಣ ಹೊಂದಿರುವ ಸಂಪನ್ಮೂಲ-ಸಮೃದ್ಧ ದ್ವೀಪವಾದ ಗ್ರೀನ್ಲ್ಯಾಂಡ್, ಹಿಂದಿನ ಡ್ಯಾನಿಶ್ ವಸಾಹತು ಮತ್ತು ಈಗ ಡೆನ್ಮಾರ್ಕ್ನ ಸ್ವಾಯತ್ತ ಪ್ರದೇಶವಾಗಿದೆ. ಇದು ಆರ್ಕ್ಟಿಕ್ನಲ್ಲಿ ಸ್ಥಿತಗೊಂಡಿದ್ದು, ವಿಶ್ವದ ಅತ್ಯಂತ ಕಡಿಮೆ ಜನನಿಬಿಡ ಪ್ರದೇಶಗಳಲ್ಲೊಂದು. ಇದರ ಬಹುಪಾಲು ಭೂಭಾಗ ಮಂಜುಗಡ್ಡೆಯ ಅಡಿಯಲ್ಲಿ ಮುಚ್ಚಿಕೊಂಡಿದೆ.
ಸುಮಾರು 56,000 ನಿವಾಸಿಗಳು ದ್ವೀಪದ ಪಟ್ಟಣಗಳ ನಡುವೆ ದೋಣಿ, ಹೆಲಿಕಾಪ್ಟರ್ ಮತ್ತು ವಿಮಾನದ ಮೂಲಕ ಪ್ರಯಾಣಿಸುತ್ತಾರೆ. ಈ ಪಟ್ಟಣಗಳು ಪ್ರಧಾನವಾಗಿ ಪಶ್ಚಿಮ ಕರಾವಳಿಯಲ್ಲೇ ಹರಡಿಕೊಂಡಿವೆ. ಗ್ರೀನ್ಲ್ಯಾಂಡ್ನ ರಾಜಧಾನಿ ನೂಕ್. ಕರಾವಳಿ ಮತ್ತು ಒಳನಾಡಿನ ಪರ್ವತಗಳ ನಡುವೆ ಇರುವ ಈ ನಗರಗಳಲ್ಲಿ ಗಾಢ ಬಣ್ಣದ ಮನೆಗಳನ್ನು ಒತ್ತೊತ್ತಾಗಿ ಕಟ್ಟಿರುವ ದೃಶ್ಯ ಕಂಡುಬರುತ್ತದೆ.
ನಗರಗಳ ಹೊರಗೆ ಗ್ರೀನ್ಲ್ಯಾಂಡ್ ಬಹುತೇಕ ನಿರ್ಜನವಾಗಿದ್ದು, ಅದರ 81 ಶೇಕಡಾ ಭೂಮಿ ಮಂಜುಗಡ್ಡೆಯ ಅಡಿಯಲ್ಲಿದೆ. ಜನಸಂಖ್ಯೆಯ ಸುಮಾರು 90 ಶೇಕಡಾ ಇನ್ಯೂಟ್ ಮೂಲದವರು. ಗ್ರೀನ್ಲ್ಯಾಂಡ್ನ ಆರ್ಥಿಕತೆ ಬಹುಕಾಲದಿಂದ ಮೀನುಗಾರಿಕೆಯನ್ನು ಆಧರಿಸಿದೆ.
ಕಾರ್ಯತಂತ್ರವಾಗಿ ಏಕೆ ಮುಖ್ಯ?
ಭೌಗೋಳಿಕ ರಾಜಕೀಯ ಸ್ಥಾನಮಾನ, ಸಮೃದ್ಧ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅದರ ಸುತ್ತಲಿನ ಸಂಭಾವ್ಯ ಉತ್ತರದ ಹಡಗು ಮಾರ್ಗಗಳು ಗ್ರೀನ್ಲ್ಯಾಂಡ್ ಅನ್ನು ಪ್ರಮುಖ ಕಾರ್ಯತಂತ್ರದ ಪ್ರದೇಶವನ್ನಾಗಿ ಮಾಡುತ್ತವೆ.
ಗ್ರೀನ್ಲ್ಯಾಂಡ್ ಅಮೆರಿಕ ಮತ್ತು ಯುರೋಪ್ ನಡುವಿನ ಮಧ್ಯಭಾಗದಲ್ಲಿ ಸ್ಥಿತಗೊಂಡಿದ್ದು, ಎರಡು ಖಂಡಗಳ ನಡುವೆ ನೈಸರ್ಗಿಕ ಸೇತುವೆ ಅಥವಾ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್ ಮತ್ತು ಯುಕೆ ನಡುವಿನ ಸಮುದ್ರ ಮಾರ್ಗವನ್ನು GIUK Gap ಎಂದು ಕರೆಯಲಾಗುತ್ತದೆ. ಇದು ಆರ್ಕ್ಟಿಕ್ ಪ್ರದೇಶವನ್ನು ಅಟ್ಲಾಂಟಿಕ್ ಮಹಾಸಾಗರಕ್ಕೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ವ್ಯಾಪಾರ ಮತ್ತು ಭದ್ರತೆ ಎರಡಕ್ಕೂ ಉತ್ತರ ಅಟ್ಲಾಂಟಿಕ್ಗೆ ಪ್ರವೇಶವನ್ನು ನಿಯಂತ್ರಿಸುವಲ್ಲಿ ಮಹತ್ವದ್ದಾಗಿದೆ.
ತೈಲ, ಅನಿಲ ಹಾಗೂ ಅಪರೂಪದ ಖನಿಜಗಳನ್ನು ಒಳಗೊಂಡ ಸಮೃದ್ಧ ನೈಸರ್ಗಿಕ ಸಂಪನ್ಮೂಲಗಳು ಇದರ ಕಾರ್ಯತಂತ್ರದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಚೀನಾ ಅಪರೂಪದ ಖನಿಜ ಉದ್ಯಮದ ಮೇಲಿನ ತನ್ನ ಪ್ರಾಬಲ್ಯವನ್ನು ಅಮೆರಿಕದ ಮೇಲೆ ಒತ್ತಡ ಹೇರುವ ಸಾಧನವಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸಂಪನ್ಮೂಲಗಳು ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾಗಿವೆ.
ಹವಾಮಾನ ಬಿಕ್ಕಟ್ಟಿನಿಂದಾಗಿ ಆರ್ಕ್ಟಿಕ್ ನ ಮಂಜುಗಡ್ಡೆ ಕರಗುತ್ತಿದ್ದು, ಇದರಿಂದ ಗ್ರೀನ್ಲ್ಯಾಂಡ್ನ ಖನಿಜ ಸಂಗ್ರಹಗಳಿಗೆ ಹೆಚ್ಚಿನ ಪ್ರವೇಶ ಸಾಧ್ಯವಾಗಬಹುದು. ಆದರೆ ಪರ್ವತಮಯ ಭೂಪ್ರದೇಶ, ಮೂಲಸೌಕರ್ಯಗಳ ಕೊರತೆ ಮತ್ತು ಜಾರಿಯಲ್ಲಿರುವ ಪರಿಸರ ನಿಯಮಗಳು ಗಣಿಗಾರಿಕೆಯನ್ನು ಸವಾಲಿನದ್ದಾಗಿಸುತ್ತವೆ. ಅದೇ ಸಮಯದಲ್ಲಿ ಕರಗುತ್ತಿರುವ ಮಂಜುಗಡ್ಡೆ ಉತ್ತರದ ಹಡಗು ಮಾರ್ಗಗಳನ್ನು ವರ್ಷದ ಹೆಚ್ಚಿನ ಅವಧಿಗೆ ಸಂಚಾರಕ್ಕೆ ಯೋಗ್ಯವಾಗಿಸುತ್ತಿದ್ದು, ವ್ಯಾಪಾರ ಮತ್ತು ಭದ್ರತೆ ಎರಡರ ಮೇಲೂ ಪರಿಣಾಮ ಬೀರುತ್ತದೆ.
ಕಳೆದ ತಿಂಗಳು ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, “ನಮಗೆ ಗ್ರೀನ್ಲ್ಯಾಂಡ್ ಖನಿಜಗಳಿಗಾಗಿ ಅಲ್ಲ, ರಾಷ್ಟ್ರೀಯ ಭದ್ರತೆಗಾಗಿ ಅಗತ್ಯ” ಎಂದು ಹೇಳಿದ್ದಾರೆ.
ರಾಜಕೀಯ ಸ್ಥಾನಮಾನ
ಗ್ರೀನ್ ಲ್ಯಾಂಡ್ ಸ್ವತಂತ್ರ ರಾಷ್ಟ್ರವಲ್ಲ; ಇದು ಡೆನ್ಮಾರ್ಕ್ ಸಾಮ್ರಾಜ್ಯದೊಳಗಿನ ಸ್ವ-ಆಡಳಿತ ಪ್ರದೇಶವಾಗಿದೆ. ಕಳೆದ ದಶಕಗಳಲ್ಲಿ ಗ್ರೀನ್ಲ್ಯಾಂಡ್ ಕ್ರಮೇಣ ಹೆಚ್ಚಿನ ಅಧಿಕಾರಗಳನ್ನು ಪಡೆದುಕೊಂಡಿದೆ. ವಿಶೇಷವಾಗಿ 2009ರ ಸ್ವ-ಸರ್ಕಾರಿ ಕಾಯ್ದೆಯು ದ್ವೀಪಕ್ಕೆ ತನ್ನದೇ ಆದ ಸ್ಥಳೀಯ ವಿಷಯಗಳ ಮೇಲೆ ನಿಯಂತ್ರಣ ನೀಡಿತು.
ಡೆನ್ಮಾರ್ಕ್ನ ಆರ್ಥಿಕ ಬೆಂಬಲವಿಲ್ಲದೆ ತನ್ನ ಆರ್ಥಿಕತೆ ಸ್ವತಂತ್ರವಾಗಿ ನಿಲ್ಲುವ ಹಂತವನ್ನು ತಲುಪಿದರೆ, ಗ್ರೀನ್ಲ್ಯಾಂಡ್ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗುವ ಹಕ್ಕನ್ನು ಈ ಒಪ್ಪಂದ ಅಧಿಕೃತವಾಗಿ ಗುರುತಿಸುತ್ತದೆ. ಆದರೆ ಡ್ಯಾನಿಶ್ ಸಬ್ಸಿಡಿಗಳು ಗ್ರೀನ್ಲ್ಯಾಂಡ್ನ ಆರ್ಥಿಕತೆಯಲ್ಲಿ ಇನ್ನೂ ಪ್ರಮುಖ ಪಾತ್ರ ವಹಿಸುತ್ತಿವೆ. ಅವು ಅದರ ಸರ್ಕಾರಿ ಬಜೆಟ್ನ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿವೆ.
ಅನೇಕ ಗ್ರೀನ್ಲ್ಯಾಂಡರ್ಗಳು ಸ್ವಾತಂತ್ರ್ಯದ ಕಲ್ಪನೆಯನ್ನು ಬೆಂಬಲಿಸುತ್ತಿದ್ದರೂ, ಮೀನುಗಾರಿಕೆಯನ್ನು ಮೀರಿದ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯ ಸೇರಿದಂತೆ ಆರ್ಥಿಕ ವಾಸ್ತವಗಳು ಪ್ರಮುಖ ಅಡಚಣೆಗಳಾಗಿ ಉಳಿದಿವೆ.
ಆರ್ಥಿಕತೆ: ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಹೊಸ ಸಾಧ್ಯತೆಗಳು
ದಶಕಗಳಿಂದ ಗ್ರೀನ್ಲ್ಯಾಂಡ್ನ ಆರ್ಥಿಕತೆಯ ಬೆನ್ನೆಲುಬಾಗಿರುವುದು ಮೀನುಗಾರಿಕೆ ಮತ್ತು ಸಮುದ್ರ ಆಹಾರ ರಫ್ತು. ಇವು ದ್ವೀಪದ ಆದಾಯದ ಬಹುಪಾಲನ್ನು ಹೊಂದಿವೆ. ತಣ್ಣೀರುಗಳಲ್ಲಿ ಸೀಗಡಿ, ಕಾಡ್ ಮತ್ತು ಹಾಲಿಬಟ್ ಸಮೃದ್ಧವಾಗಿದ್ದು, ಸ್ಥಳೀಯ ಜೀವನೋಪಾಯಕ್ಕೂ ವಿದೇಶಿ ಮಾರುಕಟ್ಟೆಗೂ ಪ್ರಮುಖ ಉತ್ಪನ್ನಗಳಾಗಿವೆ.
ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರು ದ್ವೀಪದ ಮಂಜುಗಡ್ಡೆಗಳು, ವನ್ಯಜೀವಿಗಳು ಮತ್ತು ಧ್ರುವ ಪ್ರಭೆ (ನಾರ್ದರ್ನ್ ಲೈಟ್ಸ್) ನೋಡಲು ಬರುತ್ತಿರುವುದರಿಂದ ಪ್ರವಾಸೋದ್ಯಮವೂ ಬೆಳೆಯುತ್ತಿದೆ. ಆದರೆ ಕಾಲೋಚಿತ ಪ್ರವಾಸೋದ್ಯಮವು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗಿಲ್ಲದ ಸಾರಿಗೆ ಮತ್ತು ಮೂಲಸೌಕರ್ಯಗಳ ಮೇಲೆ ಒತ್ತಡ ಉಂಟುಮಾಡುತ್ತಿದೆ.
ಜಾಗತಿಕ ಮಹತ್ವ
ಗ್ರೀನ್ಲ್ಯಾಂಡ್ನ ನಿಜವಾದ ಜಾಗತಿಕ ಮಹತ್ವವು ಅದರ ಸಣ್ಣ ಜನಸಂಖ್ಯೆಯನ್ನು ಮೀರಿದೆ. ಮಂಜುಗಡ್ಡೆ ಕರಗುತ್ತಿದ್ದಂತೆ ಹೊಸ ಹಡಗು ಮಾರ್ಗಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳಿಗೆ ಪ್ರವೇಶ ಮಾರ್ಗಗಳು ತೆರೆದಿಡುತ್ತಿವೆ. ದ್ವೀಪವು ಈಗಾಗಲೇ ಪ್ರಮುಖ ಸೈನಿಕ ಮೂಲಸೌಕರ್ಯಕ್ಕೆ ನೆಲೆಯಾಗಿದೆ.
ಆರ್ಕ್ಟಿಕ್ ಪ್ರದೇಶದಲ್ಲಿ ತನ್ನ ಪ್ರಭಾವ ವಿಸ್ತರಿಸಲು ಚೀನಾ ಕೂಡ ಆಸಕ್ತಿ ತೋರಿಸುತ್ತಿದೆ. 2018ರಲ್ಲಿ ಚೀನಾ ತನ್ನ ಆರ್ಕ್ಟಿಕ್ ನೀತಿಯನ್ನು ಆರಂಭಿಸಿತು; ಇದನ್ನು ‘ಪೋಲಾರ್ ಸಿಲ್ಕ್ ರೋಡ್’ ಎಂದು ಕರೆಯಲಾಗುತ್ತದೆ. ಕಳೆದ ಏಳು ವರ್ಷಗಳಲ್ಲಿ ವೈಜ್ಞಾನಿಕ ಸಂಶೋಧನಾ ಯಾತ್ರೆಗಳು, ಮೂಲಸೌಕರ್ಯ ಹೂಡಿಕೆಗಳು ಮತ್ತು ನೈಸರ್ಗಿಕ ಸಂಪನ್ಮೂಲ ಸ್ವಾಧೀನಗಳ ಮೂಲಕ ಈ ಪ್ರದೇಶದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಚೀನಾ ಪ್ರಯತ್ನಿಸಿದೆ.
ಆದರೆ ಭದ್ರತಾ ಆತಂಕಗಳ ಹಿನ್ನೆಲೆಯಲ್ಲಿ ಪ್ರಮುಖ ಯೋಜನೆಗಳು ನಿರ್ಬಂಧಿಸಲ್ಪಟ್ಟಿರುವುದರಿಂದ ಈ ತಂತ್ರವು ಬಹುತೇಕ ವಿಫಲವಾಗಿದೆ. ಆದರೂ ಗ್ರೀನ್ಲ್ಯಾಂಡ್ನ ಮೇಲಿನ ಚೀನಾದ ನಿರಂತರ ಆಸಕ್ತಿ ದ್ವೀಪದ ಭೂ-ಕಾರ್ಯತಂತ್ರದ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
ಪಾಶ್ಚಿಮಾತ್ಯ ಪಾಲುದಾರಿಕೆಗಳಿಗೆ ಆದ್ಯತೆ ನೀಡಲಾಗುತ್ತಿದ್ದರೂ, ಹೂಡಿಕೆಗಳ ಒಳಹರಿವು ಇಲ್ಲದಿದ್ದರೆ ಗ್ರೀನ್ಲ್ಯಾಂಡ್ ಚೀನಾ ಸೇರಿದಂತೆ ಇತರ ರಾಷ್ಟ್ರಗಳತ್ತ ತಿರುಗಬೇಕಾಗುತ್ತದೆ ಎಂದು ಗ್ರೀನ್ಲ್ಯಾಂಡ್ನ ವ್ಯವಹಾರ ಮತ್ತು ಖನಿಜ ಸಂಪನ್ಮೂಲಗಳ ಸಚಿವರು ಎಚ್ಚರಿಸಿದ್ದಾರೆ. ಈಗಾಗಲೇ ಚೀನಾದ ಕಂಪನಿ ಶೆಂಘೆ ರಿಸೋರ್ಸಸ್ ಕ್ವಾನೆಫ್ಜೆಲ್ಡ್ ಗಣಿಯಲ್ಲಿ ಅತಿದೊಡ್ಡ ಷೇರುದಾರವಾಗಿದ್ದು, ಶೇಕಡಾ 12.5ರಷ್ಟು ಮಾಲೀಕತ್ವ ಹೊಂದಿದೆ.
ಖನಿಜ ನಿಕ್ಷೇಪಗಳು
2025ರ ವೇಳೆಗೆ 44 ಮಿಲಿಯನ್ ಮೆಟ್ರಿಕ್ ಟನ್ಗಳೊಂದಿಗೆ ಚೀನಾ ವಿಶ್ವದ ಅಪರೂಪದ ಖನಿಜ ನಿಕ್ಷೇಪಗಳಲ್ಲಿ ಪ್ರಾಬಲ್ಯ ಸಾಧಿಸಿದ್ದು, ಇದು ವಿಶ್ವದ ಒಟ್ಟು ಅಂದಾಜು 91.9 ಮಿಲಿಯನ್ ಮೆಟ್ರಿಕ್ ಟನ್ಗಳಲ್ಲಿ ಅರ್ಧದಷ್ಟಾಗಿದೆ. ಯುಎಸ್ಜಿಎಸ್ ಪ್ರಕಾರ, ಗ್ರೀನ್ಲ್ಯಾಂಡ್ನ ಅಪರೂಪದ ಖನಿಜ ನಿಕ್ಷೇಪಗಳು ಸುಮಾರು 1.5 ಮಿಲಿಯನ್ ಮೆಟ್ರಿಕ್ ಟನ್ಗಳೆಂದು ಅಂದಾಜಿಸಲಾಗಿದೆ.
ಚೀನಾದಷ್ಟಿಲ್ಲದಿದ್ದರೂ, ಗ್ರೀನ್ಲ್ಯಾಂಡ್ನ ನಿಕ್ಷೇಪಗಳು ಅಮೆರಿಕದ (1.9 ಮಿಲಿಯನ್ ಮೆಟ್ರಿಕ್ ಟನ್) ನಿಕ್ಷೇಪಗಳಿಗೆ ಸಮೀಪದಲ್ಲಿವೆ. ಅದೇ ವೇಳೆ ಕೆನಡಾ (830,000 ಮೆಟ್ರಿಕ್ ಟನ್), ದಕ್ಷಿಣ ಆಫ್ರಿಕಾ (860,000 ಮೆಟ್ರಿಕ್ ಟನ್), ಬ್ರೆಜಿಲ್ (21 ಮಿಲಿಯನ್ ಮೆಟ್ರಿಕ್ ಟನ್), ಭಾರತ (6.9 ಮಿಲಿಯನ್ ಮೆಟ್ರಿಕ್ ಟನ್) ಮತ್ತು ಆಸ್ಟ್ರೇಲಿಯಾ (5.7 ಮಿಲಿಯನ್ ಮೆಟ್ರಿಕ್ ಟನ್) ಅಪರೂಪದ ಖನಿಜ ನಿಕ್ಷೇಪಗಳನ್ನು ಹೊಂದಿವೆ.
ಗ್ರೀನ್ಲ್ಯಾಂಡ್ನ ಅಪರೂಪದ ಖನಿಜ ಸಂಪತ್ತು ಕುಜಲ್ಲೆಕ್ ಮುನ್ಸಿಪಾಲಿಟಿಯಲ್ಲಿರುವ ಕ್ವಾನೆಫ್ಜೆಲ್ಡ್ ಪ್ರದೇಶದಲ್ಲಿದೆ. ಇಲ್ಲಿ ನಿಯೋಡೈಮಿಯಮ್, ಡಿಸ್ಪ್ರೋಸಿಯಮ್ ಸೇರಿದಂತೆ ಹಲವಾರು ಖನಿಜಗಳ ಗಮನಾರ್ಹ ನಿಕ್ಷೇಪಗಳಿವೆ. ಯುಎಸ್ಜಿಎಸ್ ಪ್ರಕಾರ, ಇವು ಉನ್ನತ ಕಾರ್ಯಕ್ಷಮತೆಯ ಆಯಸ್ಕಾಂತಗಳು, ವಿದ್ಯುತ್ ವಾಹನ ಬ್ಯಾಟರಿಗಳು, ಗಾಳಿ ಟರ್ಬೈನ್ಗಳು ಮತ್ತು ಸೈನಿಕ ಉಪಕರಣಗಳ ತಯಾರಿಕೆಗೆ ಅತ್ಯಗತ್ಯವಾಗಿವೆ.
2021ರಲ್ಲಿ ಗ್ರೀನ್ಲ್ಯಾಂಡ್ ಸಂಸತ್ತು ಯುರೇನಿಯಂ ಉಪಉತ್ಪನ್ನಗಳನ್ನು ನಿರ್ಬಂಧಿಸುವ ಶಾಸನವನ್ನು ಅಂಗೀಕರಿಸಿತು. ಇದು ಪ್ರಮುಖ ಗಣಿಗಾರಿಕೆ ಯೋಜನೆಗಳ ಕಾಲಮಿತಿಯ ಮೇಲೆ ನೇರ ಪರಿಣಾಮ ಬೀರಿದೆ. ಈ ಸವಾಲುಗಳ ನಡುವೆಯೂ ಗ್ರೀನ್ಲ್ಯಾಂಡ್ ನ ಖನಿಜ ಸಂಪತ್ತಿನ ಮೇಲಿನ ಪಾಶ್ಚಿಮಾತ್ಯ ರಾಷ್ಟ್ರಗಳ ಆಸಕ್ತಿ ಮತ್ತಷ್ಟು ತೀವ್ರಗೊಂಡಿದೆ.







