ಜಪಾನ್‍ನಲ್ಲಿ 6.7 ತೀವ್ರತೆಯ ಭೂಕಂಪ, ಸುನಾಮಿ : ಭಾರಿ ಹಾನಿ

ಟೋಕಿಯೊ: ಜಪಾನ್‍ನಲ್ಲಿ ಸೋಮವಾರ ತಡರಾತ್ರಿ 6.7 ತೀವ್ರತೆಯ ಪ್ರಬಲ ಭೂಕಂಪ ಮತ್ತು ಸುನಾಮಿ ಸಂಭವಿಸಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೆಸಿಫಿಕ್ ತೀರದಲ್ಲಿ ಇದು ಸುನಾಮಿಗೆ ಕಾರಣವಾಗಿದ್ದು, 70 ಸೆಂಟಿಮೀಟರ್ ಎತ್ತರದ ಅಲೆಗಳು ಎದ್ದಿದ್ದು, ಇನ್ನಷ್ಟು ಎತ್ತರದ ಅಲೆಗಳು ಕರಾವಳಿಯನ್ನು ಅಪ್ಪಳಿಸುವ ಭೀತಿ ಇದೆ.
ದುರಂತದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸಾವಿರಾರು ಮಂದಿಯನ್ನು ಸುರಕ್ಷಿತ ಕಡೆಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ರಾತ್ರಿ ಸುಮಾರು 11.15ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಜಪಾನ್‍ನ ಉತ್ತರಭಾಗದ ಹೊನ್ಶು ಪ್ರದೇಶದ ಒಮೋರಿ ಕಡಲತೀರದಿಂದ 80 ಕಿಲೋಮೀಟರ್ ದೂರದಲ್ಲಿ ಭೂಕಂಪ ನಡೆದಿದೆ. ಇವೇಟ್ ಪ್ರದೇಶದ ಕುಜಿ ಬಂದರಿನಲ್ಲಿ 70 ಸೆಂಟಿಮೀಟರ್ ಎತ್ತರದ ಅಲೆಗಳು ದಾಖಲಾಗಿದ್ದು, ಕರಾವಳಿಯುದ್ದಕ್ಕೂ ಸುಮಾರ 50 ಸೆಂಟಿಮೀಟರ್ ಎತ್ತರದ ಅಲೆಗಳು ಅಪ್ಪಳಿಸಿವೆ. ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿ, ಮೂರು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಒಮೋರಿ, ಹಚಿನೋಹೆ ಮತ್ತಿತರ ಕಡೆಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಹೋಟೆಲ್‍ಗಳಲ್ಲಿ ಉಳಿದುಕೊಂಡಿರುವ ಪ್ರವಾಸಿಗಳು ಸೇರಿದ್ದಾರೆ. ತೊಹೊಕು ಎಂಬಲ್ಲಿ ಕಾರು ದೊಡ್ಡ ರಂಧ್ರಕ್ಕೆ ಬಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಒಮೋರಿಯಲ್ಲಿ ಬೆಂಕಿ ಆಕಸ್ಮಿಕ ವರದಿಯಾಗಿದ್ದು, 90 ಸಾವಿರ ಮಂದಿಯನ್ನು ಸುರಕ್ಷಿತ ತಾಣಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ನಿವಾಸಿಗಳು ಎತ್ತರದ ಪ್ರದೇಶಕ್ಕೆ ತೆರಳುವಂತೆ ಅಥವಾ ಮನೆಗಳಲ್ಲೇ ಉಳಿಯುವಂತೆ ಮುಖ್ಯ ಸಂಪುಟ ಕಾರ್ಯದರ್ಶಿ ಮಿನೊರು ಕಿಹರ ಸಲಹೆ ಮಾಡಿದ್ದಾರೆ. ಪರಿಸ್ಥಿತಿಯ ಅವಲೋಕನಕ್ಕೆ ತುರ್ತು ಕಾರ್ಯಪಡೆ ರಚಿಸಲಾಗಿದೆ ಎಂದು ಪ್ರಧಾನಿ ಸನೇ ತಕೈಚಿ ಪ್ರಕಟಿಸಿದ್ದಾರೆ. ಜನರ ಜೀವರಕ್ಷಣೆಗೆ ಆದ್ಯತೆ ನೀಡಿ, ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರದೇಶದ ಅಣುಸ್ಥಾವರಗಳು ಸುರಕ್ಷಿತವಾಗಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.







